ತುಮಕೂರು: ತುಮಕೂರು ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜ್ ಗುಟ್ಟಾಗಿ ಆಡಿರುವ ಮಾತು ರಟ್ಟಾಗಿದೆ.
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿ ಆರಂಭಕ್ಕೂ ಮೊದಲು ಸಂಸದ ಜಿ.ಎಸ್. ಬಸವರಾಜ್ ಮತ್ತು ಸಚಿವ ಭೈರತಿ ಗುಟ್ಟಾಗಿ ಕಿವಿಯಲ್ಲಿ ಮಾತನಾಡುತ್ತಾ, ಒಂದು ಸೀಟು ಬರಲ್ಲ, ಈ ನನ್ ಮಗ ಮಾತು ಎತ್ತಿದ್ದರೆ ಹೊಡಿ, ಬಡಿ, ಕಡಿ ಅಂತಾನೆ. ಅವನ್ಯಾರೋ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ಹೇಳುತ್ತಾನೆ. ಆತ ಒಂದು ಹ್ಯಾಂಡ್ ಬಿಲ್ ಸಹ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದಿದ್ದಾನೆ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ ಎಂದು ಮಾಧುಸ್ವಾಮಿ ಹೆಸರೆತ್ತದೇ ಪರೋಕ್ಷವಾಗಿ ಬಸವರಾಜ್ ವಾಗ್ದಾಳಿ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅದಕ್ಕೆ ಸಚಿವ ಭೈರತಿ ಬಸವರಾಜ್ ಇನ್ನೇನು ಮತ್ತೆ ಎಂದು ಹೇಳಿದ್ದು ಮತ್ತೆ ಆಡಿರುವ ಮಾತು ಸ್ಪಷ್ಟವಾಗಿ ಕೇಳಿಸುತ್ತಿಲ್ಲ, ಸುಮ್ಮನಿರು ಅಮೇಲೇ ಮಾತನಾಡೋಣ ಎಂದು ಸುದ್ದಿಗೋಷ್ಠಿ ಆರಂಭಿಸುತ್ತಾರೆ.
ಇವರಿಬ್ಬರೂ ಕಾನೂನು ಸಚಿವ ಮಾಧುಸ್ವಾಮಿ ಬಗ್ಗೆ ಹಾಗೂ ಅವರು ಜಿಲ್ಲೆಯಲ್ಲಿ ಮಾಡುತ್ತಿರುವ ಕೆಲಸ ಕಾರ್ಯದಿಂದ ತಮಗೆ ಯಾವ ರೀತಿ ತೊಂದರೆಯಾಗುತ್ತಿದೆ ಎಂದು ಹೇಳುತ್ತಿರುವುದು ಸ್ಪಷ್ಟವಾಗಿದ್ದು, ಜಿಲ್ಲೆಯ ಬಿಜೆಪಿ ನಾಯಕರ ಮಧ್ಯೆ ಎಲ್ಲವೂ ಸರಿಯಿಲ್ಲ, ಒಗ್ಗಟ್ಟು ಇಲ್ಲ ಎಂಬುದು ಬಹಿರಂಗವಾಗಿದೆ.
ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ನಂತರ ಸಚಿವ ಭೈರತಿ ಬಸವರಾಜ್ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವಂತೆ ಕಾನೂನು ಸಚಿವ ಮಾಧುಸ್ವಾಮಿಯವರಿಗೆ ಆಹ್ವಾನ ನೀಡಿದ್ದರು.