ಮಂಗಳೂರು: ಆರು ತಿಂಗಳ ವೇತನ ತಡೆ ಹಿಡಿದಿದ್ದನ್ನು ವಿರೋಧಿಸಿ ಇಲ್ಲಿನ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯದ ಕಿರಿಯ ತಾಂತ್ರಿಕ ಅಧಿಕಾರಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಏಕಾಂಗಿಯಾಗಿ ಧರಣಿ ನಡೆಸುತ್ತಿದ್ದಾರೆ.
ಕಳೆದ 22 ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜಲೀಲ್ ಇಬ್ರಾಹಿಂ ಧರಣಿ ನಡೆಸುತ್ತಿರುವ ಅಧಿಕಾರಿ. ನನ್ನ ವೇತನವನ್ನು ನೂತನವಾಗಿ ನೇಮಕಗೊಂಡ ವೈದ್ಯಾಧಿಕಾರಿಗಳು ಸಣ್ಣಪುಟ್ಟ ಕಾರಣಗಳನ್ನು ನೀಡಿ ತಡೆ ಹಿಡಿದಿರುತ್ತಾರೆ ಎಂದು ಜಲೀಲ್ ಇಬ್ರಾಹಿಂ ಆರೋಪಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ,ಆರೋಗ್ಯ ಮತ್ತು ಕುಟುಂಬ ಇಲಾಖೆಯ ಆಯುಕ್ತ, ವೈದ್ಯಾಧಿಕಾರಿ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ವೇತನ ಬಿಡುಗಡೆ ಮಾಡುವಂತೆ ಅದೇಶ ನೀಡಿದ್ದರೂ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆಗೆ ತುಂಬಾ ಕಷ್ಟವಾಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆ ಯಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳ ನಡೆಯನ್ನು ವಿರೋಧಿಸಿ ಗುರುವಾರ ಬೆಳಗ್ಗೆಯಿಂದ ಜಲೀಲ್ ಇಬ್ರಾಹಿಂ ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಏಕಾಂಗಿ ಧರಣಿ ನಡೆಸುತ್ತಾ ಗಮನ ಸೆಳೆದಿದ್ದಾರೆ.