ವೀಕೆಂಡ್ ಕರ್ಫ್ಯೂ ಬಿಜೆಪಿ ಸರಕಾರದ ದ್ವೇಷದ ತೀರ್ಮಾನ: ಐವನ್ ಡಿಸೋಜಾ

Prasthutha|

ಮಂಗಳೂರು: ಮೇಕೆದಾಟು ಯೋಜನೆಗೆ ಒತ್ತಾಯಿಸಿ ‘ನಮ್ಮ ನೀರು ನಮ್ಮ ನಡಿಗೆ’ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷವು ಜನರ ಹಕ್ಕನ್ನು ಉಳಿಸಿಕೊಳ್ಳಲು ನಡೆಯುತ್ತಿದೆಯೇ ಹೊರತು ರಾಜಕೀಯಕ್ಕಾಗಿ ಅಲ್ಲ ಎಂದು ಕಾಂಗ್ರೆಸ್ ನಾಯಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಇತ್ತೀಚೆಗೆ ರಾಮನಗರ ಸಹಿತ ಹತ್ತಾರು ಕಡೆ ಕೋವಿಡ್ ನಿಯಮ ಉಲ್ಲಂಘಿಸಿ ಸಮಾವೇಶ ನಡೆಸಿದ್ದಾರೆ. ರಾಮನಗರದಲ್ಲಿ ಬಿಜೆಪಿಯವರು ಜಂಗೀ ಕುಸ್ತಿಗೂ ನಿಂತಿದ್ದರು. ಆದರೆ ಜನರ ನೀರಿನ ಹಕ್ಕಿಗಾಗಿ ಪಾದಯಾತ್ರೆ ನಡೆಸಿದರೆ ಬಿಜೆಪಿ ಹೀನ ರಾಜಕೀಯ ನಡೆಸುತ್ತಿದೆ. ಇದನ್ನು ತಾನು ಪ್ರಬಲವಾಗಿ ಖಂಡಿಸುವುದಾಗಿ ಡಿಸೋಜಾ ಹೇಳಿದರು.
ಈ ನಡಿಗೆ ಕಾಲದಲ್ಲಿ ನಿಮ್ಮ ವಾರಾಂತ್ಯದ ಕರ್ಫ್ಯೂ ಏಕೆ? ಬೆಂಗಳೂರಿನಲ್ಲಿ ಕೋವಿಡ್ ಸ್ವಲ್ಪ ತೀವ್ರವಾಗಿರುವುದು ನಿಜ. ಹಾಗಿರುವಾಗ ಒಂದೂ ಪಾಸಿಟಿವ್ ಇಲ್ಲದ ಜಿಲ್ಲೆಗಳಲ್ಲೂ ವೀಕೆಂಡ್ ಕರ್ಫ್ಯೂ ಏಕೆ? ಅಲ್ಲದೆ ಅವರದೇ ಪಕ್ಷದ ಸಚಿವ ಕೆ.ಎಸ್. ಈಶ್ವರಪ್ಪರಂಥವರು ಸಹ ಇದನ್ನು ಖಂಡಿಸಿದ್ದಾರೆ. ವೀಕೆಂಡ್ ಕರ್ಫ್ಯೂ ಬಿಜೆಪಿ ಸರಕಾರದ ದ್ವೇಷದ ತೀರ್ಮಾನ ಎಂದು ಅವರು ಹೇಳಿದರು.

- Advertisement -

ಮೇಕೆದಾಟು ಯೋಜನೆಯಿಂದ ಏಳು ಜಿಲ್ಲೆಗಳಿಗೆ ಉಪಯೋಗವಾಗಲಿದೆ. ಕಾಂಗ್ರೆಸ್ ನದು ಜನಪರ ಹೋರಾಟ ಅಷ್ಟೇ. ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಎಲ್ಲ ರೀತಿಯ ಕೋವಿಡ್ ನಿಯಮಾವಳಿ ಪಾಲಿಸಿ ನಡೆಸುವ ವಾಗ್ದಾನ ನೀಡಿದ್ದಾರೆ. ಕರಾವಳಿ ಜಿಲ್ಲೆಗಳಿಂದಲೂ ಕಾಂಗ್ರೆಸ್ ನವರು ಮೇಕೆದಾಟು ಯೋಜನೆಯ ನಡಿಗೆಯಲ್ಲಿ ಪಾಲ್ಗೊಳ್ಳುವರು ಎಂದು ಐವನ್ ತಿಳಿಸಿದರು.

ರೈತರ ಹೋರಾಟ ವರ್ಷಗಟ್ಟಲೆ ನಡೆದಾಗ ಅವರತ್ತ ತಿರುಗಿ ನೋಡದ ಪ್ರಧಾನಿಯವರಿಗೆ ಕಾಲು ಗಂಟೆ ರಸ್ತೆಯಲ್ಲಿ ತಡೆ ಉಂಟಾದರೆ ಯಾಕೆ ನೋವಾಗಬೇಕು. ಪ್ರಧಾನಿಗಳ ಪ್ರತ್ಯೇಕ ಭದ್ರತಾ ವ್ಯವಸ್ಥೆ ಇದೆ. ಅವರು ರೈತರ ಪ್ರತಿಭಟನೆಯ ರಸ್ತೆಯಲ್ಲಿ ಹೋದುದೇಕೆ? 700 ಜನರ ಸಾವು ಕಂಡ ರೈತರಿಗೆ ಸಾಂತ್ವನ ಹೇಳದೆ ಈಗ ಬಿಜೆಪಿಯವರು ಮೊಸಳೆ ಕಣ್ಣೀರು ಸುರಿಸುವುದೇಕೆ? ಅದಕ್ಕೆ ಪಂಜಾಬ್ ರಾಜ್ಯ ಸರಕಾರ ಯಾಕೆ ಹೊಣೆ ಆಗುತ್ತದೆ ಎಂದು ಐವನ್ ಡಿಸೋಜಾ ಪ್ರಶ್ನಿಸಿದರು.

- Advertisement -

ಪತ್ರಿಕಾಗೋಷ್ಠಿಯಲ್ಲಿ ಅಪ್ಪಿ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.



Join Whatsapp