ಬೆಂಗಳೂರು : ಕೇಂದ್ರ ಸರ್ಕಾರ ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಕಚೇರಿಯನ್ನು ತೆರೆಯಲು ಒಪ್ಪಿಗೆ ನೀಡಿದೆ. ಕೇಂದ್ರ ಗೃಹ ಇಲಾಖೆಯೊಂದಿಗೆ ಹಣಕಾಸು ಇಲಾಖೆ ಈ ಕುರಿತಂತೆ ಒಪ್ಪಂದಕ್ಕೂ ಸಹಿ ಹಾಕಿದೆ. ಪ್ರಮುಖವಾಗಿ ಭಯೋತ್ಪಾದನೆ ಕುರಿತಾದ ಚಟುವಟಿಕೆಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುವ ಎನ್ ಐಎ , ಬೆಂಗಳೂರಿನಲ್ಲಿ ಸ್ಥಾಪಿಸಲಿರುವ ಕಚೇರಿಯಲ್ಲಿ 50 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಅನುಮೋದನೆ ಸಿಕ್ಕಿದೆ. ಬೆಂಗಳೂರು ಮಾತ್ರವಲ್ಲದೆ ದೇಶದ 6 ನಗರಗಳಲ್ಲಿ ಎನ್ ಐಎ (NIA) ಹೊಸ ಕಚೇರಿ ತೆರೆಯಲಿದೆ. ಬೆಂಗಳೂರು, ಅಹಮದಾಬಾದ್, ಪಟನಾ, ಜೈಪುರ, ಭೋಪಾಲ್ ಮತ್ತು ಭುವನೇಶ್ವರದಲ್ಲಿ ಎನ್ ಐಎ ಶಾಖೆಗಳನ್ನು ತೆರೆಯಲಾಗುತ್ತದೆ.
ಬೆಂಗಳೂರಿನಲ್ಲಿ ಕೆಲವೊಂದು ಸಂಸ್ಥೆಗಳು ದೇಶವಿರೋಧಿ ಚಟುಟಿಕೆಗಳನ್ನು ನಡೆಸುತ್ತಿದ್ದು ಇದನ್ನು ಸೂಕ್ತವಾಗಿ ತನಿಖೆ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಚೇರಿಯನ್ನು ತೆರೆಯಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಫಲವಾಗಿ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳ ತನಿಖೆಗಾಗಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಶಾಖಾ ಕಚೇರಿಯನ್ನು ಬೆಂಗಳೂರಿನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ.
ಬೆಂಗಳೂರು ಸೇರಿದಂತೆ ಆರು ನಗರಗಳಲ್ಲಿ ಎನ್ ಐಎ ಶಾಖೆ ಕಚೇರಿ ತೆರೆಯುವ ಕೇಂದ್ರ ಗೃಹ ಇಲಾಖೆ ಪ್ರಸ್ತಾವನೆಗೆ ಕೇಂದ್ರದ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ದೇಶದಾದ್ಯಂತ ಆರು ನಗರಗಳಲ್ಲಿ ಆರು ಶಾಖಾ ಕಚೇರಿಗಳನ್ನು ತೆರೆಯುವ ಗೃಹ ಸಚಿವಾಲಯದ ಪ್ರಸ್ತಾವನೆಗೆ ಹಣಕಾಸು ಸಚಿವಾಲಯ ಸೋಮವಾರ ಅನುಮೋದನೆ ನೀಡಿದೆ.