ನೂತನ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಗೆ ಶಿಲಾನ್ಯಾಸ

Prasthutha|

- Advertisement -

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಕಚೇರಿಯ ಶಿಲಾನ್ಯಾಸ ಕಾರ್ಯಕ್ರಮವು ಸೋಮವಾರ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಜರಗಿತು.

ಕರ್ನಾಟಕ ಗೃಹ ಮಂಡಳಿಯ ವತಿಯಿಂದ ನಡೆಯುತ್ತಿರುವ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ, “ತುಳು, ಕೊಂಕಣಿ, ಕೊಡವ, ಅರೆಭಾಷೆ ಅಕಾಡೆಮಿಗಳಿಗೆ ಭವನಗಳನ್ನು ಸರಕಾರ ನೀಡಿದಂತೆ ಯಾವುದೇ ತಾರತಮ್ಯ ತೋರದೆ ಬ್ಯಾರಿ ಅಕಾಡೆಮಿಗೂ ಭವನ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿ ರೂ.6 ಕೋಟಿ ಬಿಡುಗಡೆಯನ್ನು ಮಾಡಿತ್ತು. ಇದೀಗ ಶಿಲನ್ಯಾಸ ನಡೆದ ಅಣತಿ ದೂರದಲ್ಲಿ ಅಬ್ಬಕ್ಕ ಭವನ ನಿರ್ಮಾಣವಾಗಲಿರುವುದರಿಂದ ಎರಡು ಭವನ ಜೊತೆಜೊತೆಯಾಗಿ ಬೇಡ ಎಂಬ ವಿಷಯವನ್ನು ಕೆಲವು ವ್ಯಕ್ತಿಗಳು ಹಾಗೂ ಸಂಘಟನೆಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಇದೀಗ ಅವರ ಭಾವನೆಯನ್ನು ಗೌರವಿಸಿಕೊಂಡು ಭವನ ನಿರ್ಮಾಣದ ಉದ್ದೇಶವನ್ನು ಕೈ ಬಿಟ್ಟು, ಬಿಡುಗಡೆಯಾದ ರೂ.6 ಕೋಟಿ ಪೈಕಿ, ರೂ.3 ಕೋಟಿ ವೆಚ್ಚದ ತಳಮಟ್ಟದಲ್ಲಿ ವಾಹನ ನಿಲುಗಡೆ ಹಾಗೂ ಒಂದನೇ ಮಹಡಿಯಲ್ಲಿ ಅಕಾಡೆಮಿಗೆ ಸರಕಾರಿ ಕಚೇರಿಯನ್ನು ಮಾತ್ರ ನಿರ್ಮಾಣ ಮಾಡುವ ಬಗ್ಗೆ ಯೋಚಿಸಿ ಹೊಸ ನಕ್ಷೆ ವಿನ್ಯಾಸಗೊಳಿಸಿ ಕಾಮಗಾರಿ ಆರಂಭಿಸಲು ಇಲಾಖೆಯು ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡಿದೆ” ಎಂದು ಅವರು ವಿವರಿಸಿದರು.

- Advertisement -

ಇದೇ ಕಟ್ಟಡದಲ್ಲಿ 2 ಸಾವಿರ ಚದರ ಅಡಿಯ ಪೆರ್ಮನ್ನೂರು ಗ್ರಾಮಕರನಿಕರ ಮತ್ತು ಸರ್ವೇಯರ್ ಕಚೇರಿಯು ನಿರ್ಮಾಣವಾಗಲಿದೆ. ಇಲ್ಲಿ ಯಾವುದೇ ಭವನ ನಿರ್ಮಾಣವಾಗದೆ ಕೇವಲ ಸರಕಾರಿ ಕಚೇರಿ ನಿರ್ಮಾಣವಾಗುವುದಾದರೆ ತಮ್ಮ ಯಾವುದೇ ಅಭ್ಯಂತರವಿಲ್ಲ ಎಂಬ ಸಂಘಟನೆಯ ಅಭಿಪ್ರಾಯಕ್ಕೆ ಪೂರಕವಾಗಿ ಶಿಲನ್ಯಾಸ ನೆರವೇರಿಸಿದ್ದು ಗೊಂದಲ ನಿರ್ಮಾಣವಾಗದೆ ಇರಲಿ ಎಂಬ ಕಾರಣಕ್ಕಾಗಿ ಹಿಂದೂ ಧರ್ಮದ ಅರ್ಚಕರ ಮೂಲಕ ಭೂಮಿ ಪೂಜೆ ಹಾಗೂ ಇಸ್ಲಾಂ ಧರ್ಮದ ಪ್ರಕಾರ ದುವಾವನ್ನು ಜಂಟಿಯಾಗಿ ನಡೆಸಲಾಯಿತು.

ಅಕಾಡೆಮಿಯ ಈ ನೂತನ ಕಚೇರಿ ಹಜ್ಜ್ ಮತ್ತು ವಕ್ಫ್ ಇಲಾಖೆ ಅಥವಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಬದಲಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿ ಇರುವ ಕಟ್ಟಡವಾಗಿದ್ದು, ಈ ಕಚೇರಿಯಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ ಎಂದು ಬ್ಯಾರಿ ಅಕಾಡೆಮಿಯ ಅಧ್ಯಕ್ಷರು ಸ್ಪಷ್ಟಪಡಿಸಿದ್ದು, ಯಾವುದೇ ಗಾಳಿ ಮಾತಿಗೆ ಕಿವಿಕೊಡಬಾರದು, ಸಮಾಜದ ಸ್ವಾಸ್ಥ ಕೆಡದಂತೆ ಸಾರ್ವಜನಿಕರು ಈ ವಿಚಾರದಲ್ಲಿ ಸಹಕಾರ ನೀಡಬೇಕೆಂದು ರಹೀಂ ಉಚ್ಚಿಲ್ ಆಗ್ರಹಿಸಿದ್ದಾರೆ.
ಭೂಮಿ ಪೂಜೆ ನೆರವೇರಿಸಿದ ತಿರುಮಲೇಶ್ ಭಟ್ ಮಾತನಾಡಿ ಈ ಕಚೇರಿಯು ಎಲ್ಲಾ ವರ್ಗದ ಜನರ ಆಶಯಕ್ಕೆ ತಕ್ಕಂತೆ ಯಾವುದೇ ವಿಘ್ನವಿಲ್ಲದೆ ನಡೆಯಲಿ, ಸೌಹಾರ್ದತೆಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿ ಎಂದು ಆಶೀರ್ವಚನ ನೀಡಿದರು. ದುವಾ ನೆರವೇರಿಸಿ ಮಾತನಾಡಿದ ಸೈಯದ್ ಮುಸ್ತಫಾ ತಂಙಳ್ “ಪರಸ್ಪರ ಅಪನಂಬಿಕೆಗಳನ್ನು ದೂರವಾಗಿಸಿ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುವ ಸರಕಾರದ ನಿಯಾಮಾನುಸಾರ ಯಾವುದೇ ಧರ್ಮೀಯರ ಭಾವನೆಗೆ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸುವ ಕೇಂದ್ರವಾಗಿ ಈ ಕಚೇರಿ ಮೂಡಿ ಬರಲಿ” ಎಂದು ಹಾರೈಸಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮ ಸ್ವಾಗತ ಭಾಷಣ ನೇರವೇರಿಸಿ ಇದೊಂದು ಸಾಂಕೇತಿಕ ಕಾರ್ಯಕ್ರಮವಾಗಿದ್ದು, ಕಾಮಗಾರಿ ಮುಗಿದ ಬಳಿಕ ಶಿಷ್ಟಾಚಾರದಂತೆ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರನ್ನು ಆಹ್ವಾನಿಸಿ ಕಟ್ಟಡದ ಉದ್ಘಾಟನೆ ನೆರವೇರಿಸಲಾಗುವುದು ಎಂದು ತಿಳಿಸಿದರು. ಕರ್ನಾಟಕ ಗೃಹ ಮಂಡಳಿಯ ಇಂಜಿನೀಯರ್ ವಿಜಯ್ ಕುಮಾರ್ ವಂದಿಸಿದರು. ಗುತ್ತಿಗೆದಾರ ಪ್ರಭಾಕರ್ ಯೆಯ್ಯಾಡಿ ಮುಂತಾದವರು ಉಪಸ್ಥಿತರಿದ್ದರು.



Join Whatsapp