ನವದೆಹಲಿ: ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ನರಮೇಧಕ್ಕೆ ಕರೆ ಮತ್ತು ದ್ವೇಷ ಭಾಷಣಗೈದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಮೀಯತ್ ಉಲೇಮಾ ಎ ಹಿಂದ್ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಮೌಲಾನಾ ಸೈಯ್ಯದ್ ಮಹ್ಮೂದ್ ಅಸದ್ ಮದನಿ ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಮುದಾಯದ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿರುವುದು ಮತ್ತು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ಸೇರಿದಂತೆ ಮುಸ್ಲಿಮರ ವಿರುದ್ಧದ ದ್ವೇಷ ಭಾಷಣ ಮಾಡಿದ್ದನ್ನು ಅರ್ಜಿಯಲ್ಲಿ ತಿಳಿಸಲಾಗಿದೆ.
2018 ರಿಂದ ದೇಶಾದ್ಯಂತ ನಡೆಯುತ್ತಿರುವ ಇಂತಹ ಪ್ರಕರಣಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮದನಿ ತನ್ನ ಅರ್ಜಿಯಲ್ಲಿ ದೂರಿದ್ದಾರೆ.
ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ, ಗುರ್ಗಾಂವ್ ನಲ್ಲಿ ಶುಕ್ರವಾರದ ನಮಾಝ್ ಗೆ ಅಡ್ಡಿ ಮತ್ತು ಪ್ರತಿಭಟನೆ, ತ್ರಿಪುರಾ ಜಾಥಾಯಲ್ಲಿ ಅವಹೇಳನಕಾರಿ ಘೋಷಣೆ ಸೇರಿದಂತೆ ಹಲವಾರು ಘಟನೆಗಳನ್ನು ಅರ್ಜಿಯಲ್ಲಿ ನಮೂದಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮೌಲಾನಾ ಮಹ್ಮೂದ್ ಮದನಿ, ಹರಿದ್ವಾರದ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.