ಕೋಹಿಮಾ: ಹದಿನಾಲ್ಕು ಮಂದಿ ಕೂಲಿ ಕಾರ್ಮಿಕರನ್ನು ಭದ್ರತಾ ಪಡೆ ಸಿಬ್ಬಂದಿ ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ ಕೇಂದ್ರ ಸರ್ಕಾರ AFSPA ಕಾಯ್ದೆಯ ಅವಧಿಯನ್ನು ಗುರುವಾರ ಕನಿಷ್ಠ ಆರು ತಿಂಗಳವರೆಗೆ ವಿಸ್ತರಿಸಿದೆ.
AFSPA ಕಾಯ್ದೆಯನ್ನು ಹಿಂಪಡೆಯುವಂತೆ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದರೂ ಇವ್ಯಾವುದನ್ನೂ ಲೆಕ್ಕಿಸದೆ ಕೇಂದ್ರ ಸರ್ಕಾರ ಮತ್ತೆ ಭದ್ರತಾ ಪಡೆಯ ವಿಶೇಷಾಧಿಕಾರವನ್ನು ಮತ್ತೆ ಆರು ತಿಂಗಳವರೆಗೆ ವಿಸ್ತರಿಸಿರುವುದು ಈಶಾನ್ಯ ರಾಜ್ಯಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವಿಸ್ತರಣೆ ಜೊತೆಗೆ ಈ ಕಾಯ್ದೆಯ ಕುರಿತು ಪರಿಶೀಲನೆ ನಡೆಸಲು ಸಮಿತಿಯೊಂದನ್ನು ಸರ್ಕಾರ ರಚಿಸಿದೆ.
ಇತ್ತೀಚೆಗೆ ಹದಿನಾಲ್ಕು ಮಂದಿ ಕೂಲಿ ಕಾರ್ಮಿಕರನ್ನು ಯಾವುದೇ ಪ್ರಚೋದನೆ ಇಲ್ಲದೆ ಭದ್ರತಾ ಸಿಬ್ಬಂದಿ ಹತ್ತಿರದಿಂದ ಗುಂಡಿಕ್ಕಿ ಹತ್ಯೆ ನಡೆಸಿದ್ದರು. ಈ ಘಟನೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವಿಶೇಷಾಧಿಕಾರ ಕಾಯ್ದೆಯನ್ನು ಹಿಂಪಡೆಯುವಂತೆ ನಾಗರಿಕ ಸಮಾಜದಿಂದ ಒತ್ತಾಯ ಕೇಳಿಬಂದಿತ್ತು.
ಮಾತ್ರವಲ್ಲ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ವಿವಾದಾತ್ಮಕ AFSPA ಕಾಯ್ದೆಯನ್ನು ರದ್ದುಗೊಳಿಸುವ ನಿರ್ಣಯವನ್ನು ಅಂಗೀಕರಿಸಲಾಗಿತ್ತು.
ಈ ನಡುವೆ ನಾಗಾಲ್ಯಾಂಡ್ ನಲ್ಲಿ ಗೊಂದಲಮಯ ಮತ್ತು ಅಪಾಯಕಾರಿ ಸ್ಥಿತಿಯಲ್ಲಿದೆ ಎಂಬ ನೆಪವೊಡ್ಡಿ AFSPA ಕಾಯ್ದೆಯನ್ನು ಡಿಸೆಂಬರ್ 30, 2021 ರಿಂದ ಜಾರಿಗೆ ಬರುವಂತೆ ಕನಿಷ್ಠ ಆರು ತಿಂಗಳ ಅವಧಿಗೆ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಅದೇ ರೀತಿ ಈ ಕಾಯ್ದೆಯ ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸಿದ್ದು, 45 ದಿನಗಳಲ್ಲಿ ತನ್ನ ವರದಿ ಸಲ್ಲಿಸಲಿದೆ ಎಂದು ಅಂದಾಜಿಸಲಾಗಿದೆ.