ಬೆಂಗಳೂರು: ನಡುರಸ್ತೆಯಲ್ಲಿ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಮೂರನೇ ಪತಿ ಸೇರಿ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಗಣಿ ಮೂಲದ ಬೆಳ್ಳಂದೂರಿನಲ್ಲಿ ವಾಸವಿದ್ದ ಅರ್ಚನಾ ರೆಡ್ಡಿ (42) ಅವರನ್ನು ಕೊಲೆಗೈದ ಆಕೆಯ ಮೂರನೇ ಪತಿ ನವೀನ್ ಹಾಗೂ ಸಂತೋಷ್ ಎಂಬವರನ್ನು ಬಂಧಿಸಿ ಮತ್ತೊಬ್ಬನ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಗಣಿ ಪುರಸಭೆಗೆ ಡಿ.27ರಂದು ಮತದಾನ ನಡೆದಿದ್ದು ಮತ ಹಾಕಲು ಹೋಗಿದ್ದ ಅರ್ಚನಾ, ರಾತ್ರಿ 10.30ರ ಸುಮಾರಿಗೆ ಮಗನೊಂದಿಗೆ ಮನೆಗೆ ಮರಳುತ್ತಿದ್ದರು. ಹೊಸರೋಡ್ ಸಿಗ್ನಲ್ ಬಳಿ ಇನ್ನೋವಾ ಕಾರು ಅಡ್ಡಗಟ್ಟಿದ್ದ ಆರೋಪಿಗಳು ಮಚ್ಚು ಮತ್ತು ಲಾಂಗ್ ಗಳಿಂದ ಅರ್ಚನಾ ಮೇಲೆ ಮನಸೋ ಇಚ್ಛೆ ದಾಳಿ ನಡೆಸಿದ್ದರು.
ಇದನ್ನು ಕಂಡು ಭಯಭೀತರಾಗಿದ್ದ ಕಾರು ಚಾಲಕ ಹಾಗೂ ಅರ್ಚನಾ ಅವರ ಮಗ ಕಾರಿನಿಂದ ಇಳಿದು ಪರಾರಿಯಾಗಿದ್ದರು.
ಹಲವು ವರ್ಷಗಳ ಹಿಂದೆ ಅರವಿಂದ್ ಎಂಬಾತನನ್ನು ಅರ್ಚನಾ ಮದುವೆಯಾಗಿದ್ದು ಈ ದಾಂಪತ್ಯದಲ್ಲಿ ಓರ್ವ ಮಗ ಮತ್ತು ಓರ್ವ ಪುತ್ರಿಯಿದ್ದಾರೆ.
ಬಳಿಕ ಕಾರಣಾಂತರಗಳಿಂದ ಅರವಿಂದ್ ನಿಂದ ಅರ್ಚನಾ ಬೇರೆ ಆಗಿದ್ದರು. ಬಳಿಕ ಸಿದ್ದಿಕ್ ಎಂಬಾತನ ಜೊತೆಗಿದ್ದ ಅರ್ಚನಾ, ಎರಡು ವರ್ಷಗಳ ಬಳಿಕ ಆತನಿಂದಲೂ ದೂರವಾಗಿದ್ದರು.
ನಂತರ ಕಳೆದ ಐದಾರು ವರ್ಷಗಳಿಂದ ನವೀನ್ ಎಂಬಾತನ ಜೊತೆಗೆ ಸಂಪರ್ಕ ಹೊಂದಿದ್ದಳು. ಬಳಿಕ ನವೀನ್ ಜೊತೆ ಅರ್ಚನಾ ಮದುವೆ ಕೂಡ ಆಗಿದ್ದರು. ಅರ್ಚನಾ ಹೆಸರಲ್ಲಿ ಸ್ವಂತ ಮನೆ ಆಸ್ತಿ ಜಮೀನು ಇತ್ತು. ನವೀನ್ ಹಣಕಾಸಿಗೆ ಅರ್ಚನಾ ಅವರನ್ನೇ ಅವಲಂಬಿಸಿದ್ದ ಎನ್ನಲಾಗಿದೆ.
ಈ ನಡುವೆ ದಂಪತಿ ನಡುವೆ ಚನ್ನಪಟ್ಟಣದಲ್ಲಿರುವ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ಸಂಬಂಧ ಜಿಗಣಿ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಬಳಿಕ ನವೀನ್ ನಿಂದ ದೂರವಾಗಿದ್ದ ಅರ್ಚನಾ, ಮಗನೊಂದಿಗೆ ಬೆಳ್ಳಂದೂರಿನ ಮನೆಯೊಂದರಲ್ಲಿ ವಾಸವಿದ್ದರು.
ಜಮೀನು ವಿವಾದವನ್ನು ನಾನು ಬಗೆಹರಿಸುತ್ತೇನೆ, ತನಗೆ ಷೇರು ನೀಡುವಂತೆ ನವೀನ್ ಕೇಳಿದ್ದಾನೆ. ಇದಕ್ಕೆ ಅರ್ಚನಾ ವಿರೋಧ ವ್ಯಕ್ತಪಡಿಸಿದ್ದರು.
ಬೇರೆ ಯುವಕರೊಂದಿಗೆ ಅರ್ಚನಾಗೆ ಸಂಬಂಧ ಇತ್ತು ಎಂದು ನವೀನ್ ಇತ್ತೀಚೆಗೆ ಗಲಾಟೆ ಮಾಡಿದ್ದ. ಇದೇ ಕಾರಣಕ್ಕೆ ನವೀನ್ ವಿರುದ್ಧ ಅರ್ಚನಾ ನೀಡಿದ್ದ ದೂರಿನ ಅನ್ವಯ ಕೇಸ್ ದಾಖಲಾಗಿತ್ತು. ಇದರಿಂದ ಕೋಪಗೊಂಡ ನವೀನ್ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅದನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತಿಳಿಸಿದ್ದಾರೆ.