ಪೀಣ್ಯ ಮೇಲ್ಸೇತುವೆ ಬಂದ್: ಭಾರೀ ಸಂಚಾರ ದಟ್ಟಣೆ

Prasthutha|

ಬೆಂಗಳೂರು: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಪೀಣ್ಯ- ಗೊರಗುಂಟೆಪಾಳ್ಯ ಮೇಲ್ಸೇತುವೆಯ ಸಂಚಾರವನ್ನು ಒಂದು ವಾರ ನಿರ್ಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದುರಸ್ತಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಮಾರು 20 ಜಿಲ್ಲೆಗಳಿಂದ ನಗರಕ್ಕೆ ಬರುವ ಸಾರ್ವಜನಿಕರು ಮತ್ತು ಪ್ರಯಾಣಿಕರ ಪರದಾಟ ಮುಂದುವರಿದಿದೆ.

- Advertisement -

ಮೇಲ್ಸೇತುವೆ ಬಂದ್ ನಿಂದ ಸಾರ್ವಜನಿಕರು ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಉಂಟಾಗಿದೆ.

ಪೊಲೀಸರು ಹಾಗೂ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ನಗರಕ್ಕೆ ಆಗಮಿಸಲು ಹಾಗೂ ನಗರದಿಂದ ಹೊರ ಹೋಗಲು ನೈಸ್ ರಸ್ತೆ ಮುಖಾಂತರ ಮಾಗಡಿ ರಸ್ತೆಯನ್ನು ಬಳಸಲು ಮನವಿ ಮಾಡುತ್ತಿದ್ದಾರೆ. ಬದಲಿ ರಸ್ತೆಗೆ ಸಾಕಷ್ಟು ದೂರ ಸಂಚರಿಸಿ ಬರಬೇಕಾಗಿದೆ. ವಾಹನ ಸವಾರರು ಸರ್ವೀಸ್ ರಸ್ತೆಯಲ್ಲಿ ಗಂಟೆಗಟ್ಟಲೆ ತಮ್ಮ ವಾಹನಗಳಲ್ಲೇ ಕುಳಿತು ಕಾದು ಕಾದು ಸಾಕಾಗಿ ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

- Advertisement -

ಕಳೆದ 10 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಮೇಲ್ಸೇತುವೆಯ ನಿರ್ವಹಣೆ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಹೀಗಾಗಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತುರ್ತು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಹೀಗಾಗಿ, ಎಲ್ಲಾ ಬಗೆಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಈ ಕಾರಣದಿಂದ ವಾಹನ ಸಂಚಾರ ದಟ್ಟಣೆ ವಿಪರೀತವಾಗಿದೆ ಎಂದು ಪೊಲೀಸರು, ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಡಿ.25ರಿಂದ ದಿಢೀರ್ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ಎರಡು ದಿನ ವಾಹನ ಸವಾರರು 3-4 ಗಂಟೆಗಳ ಕಾಲ ರಸ್ತೆಯಲ್ಲಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೂಕ್ತ ಮುನ್ಸೂಚನೆ ನೀಡದೆ ರಸ್ತೆ ಬಂದ್ ಮಾಡಿರುವುದರ ಪರಿಣಾಮ ಇದು ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ ತಿಳಿಸಿದರು.

ಕೇವಲ 10 ನಿಮಿಷದ ದೂರವನ್ನು ಸುಮಾರು 3 ಗಂಟೆಗಳ ಕಾಲ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಆ್ಯಂಬುಲೆನ್ಸ್ಗಳು ಟ್ರಾಫಿಕ್ನೊಳಗೆ ಸಿಲುಕಿದ್ದವು. ಇನ್ನೂ ಒಂದು ವಾರ ಕಾಲ ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಿದರೆ ಸಂಚಾರ ದಟ್ಟಣೆ ತಗ್ಗಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp