►ಕೇಂದ್ರ, ರಾಜ್ಯದಲ್ಲಿ ಬದಲಾವಣೆ ಅಗತ್ಯ – ರಕ್ಷಾ ರಾಮಯ್ಯ
ಚಾಮರಾಜನಗರ: ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ತೀವ್ರಗೊಂಡಿದ್ದು, ಚಾಮರಾಜನಗರ ಜಿಲ್ಲಾ ಯುವ ಕಾಂಗ್ರೆಸ್ ನಿಂದ “ಯುವ ಶಕ್ತಿ ನವ ದೃಷ್ಟಿ” ಬೃಹತ್ ಸಮಾವೇಶ ಆಯೋಜಿಸಲಾಗಿತ್ತು.
ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಶಾಸಕರಾದ ಕೃಷ್ಣ ಭೈರೇಗೌಡ, ರಿಜ್ವಾನ್ ಅರ್ಷದ್, ಅನಿಲ್ ಚಿಕ್ಕಮಾದು, ಆರ್. ನರೇಂದ್ರ, ಕೆಪಿವೈಸಿಸಿ ಅಧ್ಯಕ್ಷ ರಕ್ಷಾ ರಾಮಯ್ಯ ಅವರು ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.
ರಕ್ಷಾ ರಾಮಯ್ಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಬದಲಾವಣೆ ತರಲು ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸುವ ಅಗತ್ಯವಿದೆ. ಯುವ ಸಮೂಹ ಇದಕ್ಕೆ ಸಜ್ಜಾಗಬೇಕು. ಜಿಲ್ಲಾ ಘಟಕಗಳು ಮತ್ತಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಿದ್ದು, ಯುವ ಮನಸ್ಸಿನಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು. ಪ್ರತಿಯೊಬ್ಬ ಯುವ ಕಾರ್ಯಕರ್ತರು ಈ ನಿಟ್ಟಿನಲ್ಲಿ ಶಕ್ತಿ ಮೀರಿ ಶ್ರಮಿಸಬೇಕು ಎಂದರು.
ಕಾಂಗ್ರೆಸ್ ಪಕ್ಷದಿಂದ ಮಾತ್ರ ಯುವ ಸಮೂಹದ ರಕ್ಷಣೆ ಸಾಧ್ಯ. ಇದನ್ನು ಯುವ ಘಟಕಗಳು ಮನವರಿಕೆ ಮಾಡಿಕೊಡಬೇಕು. ಯುವ ಜನತೆ ಹಿಂದೆಂದೂ ಇಲ್ಲದಷ್ಟು ಸಂಕಷ್ಟದಲ್ಲಿದ್ದು, ಇದರಿಂದ ಯುವಜನರ ಆಕ್ರೋಶ ಸ್ಪೋಟಗೊಳ್ಳುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಯುವ ಜನಾಂಗಕ್ಕೆ ಯಾವುದೇ ರೀತಿಯಲ್ಲೂ ಅನುಕೂಲವಾಗಿಲ್ಲ ಎಂದು ಆರೋಪಿಸಿದರು.
ಈ ಸಮಾವೇಶದಲ್ಲಿ ಯುವ ಸಮೂಹ ಹೆಚ್ಚಿನ ಪ್ರಮಾಣದಲ್ಲಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಸದಸ್ಯತ್ವ ಪಡೆದುಕೊಂಡಿದ್ದು ವಿಶೇಷವಾಗಿತ್ತು.