ಲಖ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಬುಲ್ಡೋಜರ್ ನಾಥನ ವಿಧ್ವಂಸಕ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಲಖ್ನೋ ನಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ‘ಲಡಕೀ ಹೂ, ಲಡ್ ಸಕತೀ ಹೂ’ (ನಾನು ಹುಡುಗಿ, ಹೋರಾಡಬಲ್ಲೆ) ಮಹಿಳಾ ಮ್ಯಾರಥಾನ್ ನಡೆಸಲು ಅನುಮತಿ ನಿರಾಕರಿಸಲಾಗಿತ್ತು. ಈ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿರುವ ಉತ್ತರ ಪ್ರದೇಶ ಕಾಂಗ್ರೆಸ್ ಘಟಕವು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ‘ಬುಲ್ಡೋಜರ್‌ನಾಥ್’ ಎಂದು ಕರೆದಿದೆ.
ಝಾನ್ಸಿಯಲ್ಲಿ ನಡೆಸಿದ ಮ್ಯಾರಥಾನ್‌ನಲ್ಲಿ ಸಾವಿರಾರು ಯುವತಿಯರು ಮತ್ತು ಮಹಿಳೆಯರು ಭಾಗಿಯಾಗಿದ್ದಾರೆ. ಈ ಮ್ಯಾರಥಾನ್‌ನ ವಿಡಿಯೊಗಳನ್ನು ಕಾಂಗ್ರೆಸ್ ಪಕ್ಷವು ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ.
ಲಖ್ನೋ ಮತ್ತು ಝಾನ್ಸಿಯಲ್ಲಿ 5 ಕಿ.ಮೀ.ಗಳ ಮಹಿಳಾ ಮ್ಯಾರಥಾನ್ ಅನ್ನು ಕಾಂಗ್ರೆಸ್ ಪಕ್ಷವು ಭಾನುವಾರ ಆಯೋಜಿಸಿತ್ತು. ಆದರೆ ಲಖ್ನೋ ನಲ್ಲಿ ಮ್ಯಾರಥಾನ್ ನಡೆಸಲು ಅನುಮತಿ ನಿರಾಕರಿಸಲಾಗಿತ್ತು.
ಉತ್ತರಪ್ರದೇಶ ವಿಧಾನಸಭೆಯ ಒಟ್ಟು ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ 40ರಷ್ಟು ಟಿಕೆಟ್‌ಗಳನ್ನು ಕಾಂಗ್ರೆಸ್ ಮೀಸಲಿರಿಸಿದೆ. ಇದರ ಭಾಗವಾಗಿ ಪ್ರಿಯಾಂಕಾ ಅವರು, ‘ಲಡಕೀ ಹೂ, ಲಡ್ ಸಕತೀ ಹೂ’ ಎಂಬ ಘೋಷಣೆಯನ್ನು ಮಾಡಿದ್ದರು.