ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇನ್ನೂ ಮುಂದುವರಿರೆದಿದ್ದು, ಹಲವೆಡೆ ಮರು ಎಣಿಕೆ ಬಿರುಸಿನಿಂದ ಸಾಗಿದೆ.
ಸದ್ಯಕ್ಕೆ ದೊರಕಿರುವ ಮಾಹಿತಿಗಳ ಪ್ರಕಾರ, ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್ ಗೆ ಎಲೆಕ್ಟ್ರಲ್ ಕಾಲೇಜ್ ಮತಗಳು ಸೇರಿ 264 ಮತಗಳ ಗೆಲುವು ಪಡೆದಿದ್ದು, ಮ್ಯಾಜಿಕ್ ನಂಬರ್ 270 ತಲುಪಲು ಇನ್ನು ಕೆಲವೇ ಸಂಖ್ಯೆಗಳ ಅಗತ್ಯವಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೇವಲ 214 ಮತಗಳೊಂದಿಗೆ ಭಾರೀ ಹಿನ್ನಡೆ ಸಾಧಿಸಿದ್ದಾರೆ. ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 270 ಅನ್ನು ಸುಲಭವಾಗಿ ತಲುಪುವ ವಿಶ್ವಾಸ ವ್ಯಕ್ತಪಡಿಸಿರುವ ಜೋ ಬೈಡೆನ್, ತಮ್ಮದೇ ಗೆಲುವು ಎಂದು ಬೀಗಿದ್ದಾರೆ.
ಶ್ವೇತ ಭವನಕ್ಕಾಗಿ ನಡೆಯುತ್ತಿರುವ ಈ ರೇಸ್ ನಲ್ಲಿ ನಿಚ್ಚಳ ಬಹುಮತ ಗಳಿಸುವ ವಿಶ್ವಾಸವನ್ನು ಬೈಡನ್ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಮಾತನಾಡಿರುವ ಬೈಡನ್, “ನಾವು ಇಲ್ಲಿ ವಿಜಯದ ಘೋಷಣೆಗೆ ಬಂದಿಲ್ಲ, ಮತ ಎಣಿಕೆ ಪೂರ್ಣಗೊಳ್ಳುವಾಗ, ನಾವೇ ವಿಜೇತರು ಎಂಬ ನಂಬಿಕೆ ನಮಗಿದೆ’’ ಎಂದಿದ್ದಾರೆ. ಅವರ ಜೊತೆಗೆ ಉಪ ಅಧ್ಯಕ್ಷೀಯ ಅಭ್ಯರ್ಥಿ ಭಾರತ ಮೂಲದ ಕಮಲಾ ಹ್ಯಾರಿಸ್ ಕೂಡ ಉಪಸ್ಥಿತರಿದ್ದರು.
ಆದರೆ, ಮತ ಎಣಿಕೆ ಪ್ರಕ್ರಿಯೆಯಿಂದ ಅಸಮಾಧಾನಿತರಾಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರು ರಾಜ್ಯಗಳಲ್ಲಿ ಕೋರ್ಟ್ ಮೆಟ್ಟಿಲೇರಿದ್ದು, ಮರು ಎಣಿಕೆಯಲ್ಲಿ ತಮ್ಮ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.