►ಹೊರ ರಾಜ್ಯದ 300 ವಿದ್ಯಾರ್ಥಿಗಳಿಗೂ ವೋಟರ್ ಐಡಿ!
ಉಳ್ಳಾಲ: ಕೋಟೆಕಾರು ಪ.ಪಂ ವ್ಯಾಪ್ತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ ಅಧಿಕಾರಿಗಳು ಅಂತಿಮ ಮತದಾರ ಪಟ್ಟಿಯಿಂದ ನಕಲಿ ಮತದಾರರ ಹೆಸರನ್ನು ತೆರವುಗೊಳಿಸಲಿಲ್ಲ.
ಕೋಟೆಕಾರು ಪಟ್ಟಣದ ವಾರ್ಡ್ ನಂಬರ್ 6 (ಬಗಂಬಿಲ, ವೈದ್ಯನಾಥ ನಗರ) ಮತಗಟ್ಟೆ ಸಂಖ್ಯೆ 154 ರಲ್ಲೇ ಮೂರು ವೈದ್ಯಕೀಯ ಕಾಲೇಜುಗಳಿಗೆ ಸೇರಿದ 300 ಮಂದಿ ಹೊರ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳ ಹೆಸರನ್ನು ಮತಪಟ್ಟಿಗೆ ಸೇರಿಸಲಾಗಿದೆ.
300 ವಿದ್ಯಾರ್ಥಿಗಳ ಪೈಕಿ 60 ರಷ್ಟು ಮಂದಿಯಲ್ಲಿ ತಂದೆಯ ಹೆಸರು ಬಿಟ್ಟರೆ ವಿಳಾಸ, ಡೋರ್ ನಂಬರ್ ಇಲ್ಲ. ಉಳಿದ ವಿದ್ಯಾರ್ಥಿಗಳ ಹೆಸರು ಮತ್ತು ಹಾಸ್ಟೆಲ್ ಕೊಠಡಿ ಸಂಖ್ಯೆಯನ್ನು ನಮೂದಿಸಲಾಗಿದೆ.
ಈ ಬಗ್ಗೆ ಎಂಟು ತಿಂಗಳ ಹಿಂದೆಯೇ ವಕೀಲರಾದ ಮೋಹನರಾಜ್ ಕೋಟೆಕಾರ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡಿ ಅದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಿಳಿದುಬಂದಿದೆ.
ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ 6ನೇ ವಾರ್ಡಿನಲ್ಲಿ ಅಲ್ಲಿನ ನಿವಾಸಿಗಳ ಮತಗಳು ಇರುವುದು 550 ಮಾತ್ರ. ಈಗ ಹೆಚ್ಚುವರಿಯಾಗಿ 300 ಮತಗಳು ಸೇರಿದ್ದು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮತ ಚಲಾವಣೆಗೆ ಅವಕಾಶ ಕೊಡಲಾಗಿದೆ.
ಡಿ.27 ರಂದು ಕೋಟೆಕಾರು ಪಟ್ಟಣ ಪಂಚಾಯತ್ ಚುನಾವಣೆ ನಡೆಯಲಿದೆ.