ಬೆಳಗಾವಿ: ವಿಧಾನಸಭೆಯ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಹಲವು ಸದಸ್ಯರು ಗೈರಾಗಿರುವುದಕ್ಕೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ಪ್ರಶ್ನೋತ್ತರ ವೇಳೆ ಪ್ರಶ್ನೆ ಕೇಳಬೇಕಾದ ಶಾಸಕರೇ ಸದನಕ್ಕೆ ಗೈರಾಗಿರುವುದನ್ನು ಗಮನಿಸಿದ ಸ್ಪೀಕರ್, ಇದು ಇಂದಿನ ಪರಿಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಲು ಸದಸ್ಯರ ಹೆಸರನ್ನು ಸ್ಪೀಕರ್ ಕರೆದಾಗ ಆಡಳಿತ- ಪ್ರತಿಪಕ್ಷದ ಬಹುತೇಕ ಶಾಸಕರು ಸದನದಲ್ಲಿ ಹಾಜರಿರಲಿಲ್ಲ.
ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಕೆ.ಆರ್. ಜಯದೇವ ನಿಧನಕ್ಕೆ ಸ್ಪೀಕರ್ ಅವರು ಸಂತಾಪ ವ್ಯಕ್ತಪಡಿಸಿದರು. ನಂತರ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಮಾತನಾಡಿ, ಪ್ರಶ್ನೋತ್ತರ ಕಲಾಪ ಸಸ್ಪೆಂಡ್ ಮಾಡಿ ಉತ್ತರ ಕರ್ನಾಟಕದ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದರು.
ಈಗ ಕುಳಿತುಕೊಳ್ಳಿ, ನಿಮ್ಮ ರಿಕ್ವೆಸ್ಟ್ನ ಪರಿಗಣಿಸಿ ಪ್ರಶ್ನೋತ್ತರ ಮುಗಿದ ಮೇಲೆ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಕಾಗೇರಿ ಹೇಳಿದರು.
ಬಳಿಕ ಒಬ್ಬೊಬ್ಬರೇ ಬರುತ್ತಿದ್ದಂತೆ ಕಲಾಪ ಮುಂದುವರಿಸಿದರು.