ಮುಂಬೈ: ಪರಸ್ಪರ ಒಪ್ಪಿಗೆಯೊಂದಿಗೆ ದೀರ್ಘಾವಧಿಯ ಕಾಲ ದೈಹಿಕ ಸಂಬಂಧವನ್ನು ಬೆಳೆಸಿದ ಬಳಿಕ ಮದುವೆಯಾಗಲು ನಿರಾಕರಿಸುವುದನ್ನು ವಂಚನೆ ಎಂದು ಕರೆಯಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
1999ರ ಫೆಬ್ರವರಿ ತಿಂಗಳಲ್ಲಿ ಕೆಳಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ ಯುವಕನೋರ್ವನ ಪ್ರಕರಣದ ವಿಚಾರಣೆ ನಡೆಸಿದ ವೇಳೆ ನ್ಯಾಯಮೂರ್ತಿ ಅನುಜಾ ಪ್ರಭು ದೇಸಾಯಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್ ನಿವಾಸಿ ಕಾಶಿನಾಥ್ ಘರತ್ ಎಂಬಾತ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೂರು ವರ್ಷಗಳ ಕಾಲ ದೈಹಿಕ ಸಂಬಂಧ ಬೆಳೆಸಿದ್ದಾನೆ. ಆದರೆ ನಂತರದ ದಿನಗಳಲ್ಲಿ ಮದುವೆಯಾಗಲು ನಿರಾಕರಿಸಿ ವಂಚಿಸಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆ ಯುವತಿಯೊಬ್ಬಳು ದೂರು ದಾಖಲಿಸಿದ್ದಳು. ಈ ಸಂಬಂಧ ಕಾಶಿನಾಥ್ ಘರತ್ ವಿರುದ್ಧ ಕಲಂ 376 ಹಾಗೂ 417 ಅಡಿಯಲ್ಲಿ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಾಗಿತ್ತು.
1999ರ ಫೆಬ್ರವರಿ ತಿಂಗಳಲ್ಲಿ ಈ ಸಂಬಂಧ ವಿಚಾರಣೆ ಪೂರ್ತಿಗೊಂಡು ತೀರ್ಪು ನೀಡಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಆರೋಪಿ ಕಾಶಿನಾಥನನ್ನು ದೋಷಿ ಎಂದು ಘೋಷಿಸಿ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದರು. ಆದರೆ ಅತ್ಯಾಚಾರದ ಆರೋಪದಿಂದ ಕಾಶಿನಾಥನನ್ನು ಖುಲಾಸೆಗೊಳಿಸಲಾಗಿತ್ತು..
ಕೆಳಹಂತದ ನ್ಯಾಯಾಲಯದ ತೀರ್ಪಿನ ವಿರುದ್ಧ ಕಾಶಿನಾಥ್ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್’ನ ನ್ಯಾಯಮೂರ್ತಿ ಅನುಜಾ ಪ್ರಭು ದೇಸಾಯಿ, ಸಂತ್ರಸ್ತೆಯ ಹೇಳಿಕೆಯಲ್ಲಿ ಆಕೆ ಯಾವುದೇ ರೀತಿಯಲ್ಲಿ ಮೋಸ ಹೋಗಿದ್ದಾಳೆ ಎಂಬುದು ಸಾಬೀತಾಗುತ್ತಿಲ್ಲ. ಇಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ದೈಹಿಕ ಸಂಪರ್ಕ ನಡೆದಿದೆ ಎಂದು ಹೇಳಿದ್ದಾರೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ ತೀರ್ಪು ನೀಡಿದ ಬಾಂಬೆ ಹೈಕೋರ್ಟ್, ಆರೋಪಿಯು ಸುಳ್ಳು ಮಾಹಿತಿಯನ್ನು ನೀಡಿ ಅಥವಾ ವಂಚನೆ ಮಾಡುವ ಮೂಲಕ ಲೈಂಗಿಕ ಸಂಬಂಧ ಬೆಳೆಸಿದ್ದಾರೆ ಎಂಬುದು ಎಲ್ಲಿಯೂ ಸಾಬೀತಾಗಿಲ್ಲ. ಅಲ್ಲದೇ ಇಷ್ಟು ದೀರ್ಘ ಕಾಲದ ಸಂಬಂಧದ ಬಳಿಕ ಮದುವೆಯಾಗಲು ನಿರಾಕರಿಸುವುದನ್ನು ವಂಚನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.