ಶ್ರೀಲಂಕಾ: ಗಾಳಿಪಟ ಸ್ಪರ್ಧೆಯೊಂದರಲ್ಲಿ ಆಕಾಶದೆತ್ತರಕ್ಕೆ ಹಾರಿದ್ದ ಗಾಳಿಪಟವು ಕೊನೆಗೆ ತನ್ನನ್ನು ದಾರದ ಮೂಲಕ ನಿಯಂತ್ರಿಸುತ್ತಿದ್ದ ವ್ಯಕ್ತಿಯನ್ನೇ ಗಾಳಿಯಲ್ಲಿ ಹಾರಾಡುವಂತೆ ಮಾಡಿದ ಅಪರೂಪದ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.
ಶ್ರೀಲಂಕಾದ ಜಫ್ನಾದ ಪಾಯಿಂಟ್ ಪೆಡ್ರೋ ಎಂಬಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ಸ್ಪರ್ಧಾಳುಗಳು ನೆರೆದಿದ್ದವರನ್ನು ಮನರಂಜಿಸುತ್ತಿರುವಾಗಲೇ ಅನಿರೀಕ್ಷಿತ ಘಟನೆಯೊಂದು ನಡೆದಿದೆ.
ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 6 ಮಂದಿ ಸದಸ್ಯರ ತಂಡ, ಬೃಹತ್ ಆಕೃತಿಯ ಗಾಳಿಪಟವನ್ನು ಹಾರಿಸುವಲ್ಲಿ ನಿರತವಾಗಿತ್ತು. ಈ ವೇಳೆ ಗಾಳಿಪಟದ ದಾರ ಹಿಡಿದಿದ್ದ ಸದಸ್ಯರಲ್ಲಿ ಐವರು ಏಕಾಏಕಿ ದಾರವನ್ನು ಕೈಬಿಟ್ಟ ಕಾರಣ ಮೊದಲಿಗನಾಗಿ ದಾರ ಹಿಡಿದಿದ್ದ ವ್ಯಕ್ತಿ ದಾರದ ಜೊತೆ ಗಾಳಿಯಲ್ಲಿ ತೇಲಾಡಿದ್ದಾನೆ. ಸುಮಾರು ಒಂದು ನಿಮಿಷಗಳ ಕಾಲ 30 ಅಡಿ ಎತ್ತರದಲ್ಲಿ ತೇಲಾಡಿದ ವ್ಯಕ್ತಿಯು ಕೈ ಬಿಡದೆ ಕೊನೆಗೆ ಭೂಮಿಗೆ ಜಿಗಿದು ಪವಾಡಸದೃಶ್ಯವಾಗಿ ಬದುಕುಳಿದಿದ್ದಾನೆ.
ತಂಡದ ಸಹ ಸದಸರು ದಾರವನ್ನು ಕೈ ಬಿಟ್ಟು ಜಿಗಿಯುವಂತೆ ಜೋರಾಗಿ ಮನವಿ ಮಾಡಿದರೂ ಆತ ದಾರವನ್ನು ಗಟ್ಟಿಯಾಗಿ ಹಿಡಿದುಕೊಂಡು ಸಾಧ್ಯವಾದಷ್ಟು ಕೆಳಗೆ ಬರಲು ಪ್ರಯತ್ನಿಸಿದ್ದಾನೆ. ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶ್ರೀಲಂಕಾದಲ್ಲಿ ಥಾಯ್ ಪೊಂಗಲ್ ಹಬ್ಬದ ಅಂಗವಾಗಿ ವರ್ಷಂಪ್ರತಿ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ವಿವಿಧ ಆಕೃತಿಯ ಗಾಳಿಪಟಗಳನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ ಎಂದು ಆಯೋಜಕರು ತಿಳಿಸಿದ್ದಾರೆ.