ಬೆಳಗಾವಿ: ಮದ್ಯ ಮಾರಾಟ ಮಾಡಲು ಗುರಿ ನಿಗದಿ ಮಾಡುವ ಧೋರಣೆಯನ್ನು ಸರ್ಕಾರ ಕೈಬಿಡಬೇಕು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದ ಪ್ರಸಂಗ ವಿಧಾನಸಭೆಯಲ್ಲಿಂದು ಜರುಗಿತು.
ಪ್ರಶ್ನೋತ್ತರ ವೇಳೆಯಲ್ಲಿ ಸಂಡೂರು ಶಾಸಕ ಈ.ತುಕಾರಾಂ ಅವರು ತಮ್ಮ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.ಅಬಕಾರಿ ಇಲಾಖೆಯು ಪ್ರತಿಯೊಂದು ಮದ್ಯದಂಗಡಿಗೆ ಗುರಿ ನಿಗದಿಪಡಿಸಿರುವುದೇ ಇದಕ್ಕೆ ಕಾರಣವಾಗಿದೆ. ಮದ್ಯ ಮಾರಾಟದ ಮೂಲಕ ಪ್ರತಿ ತಿಂಗಳು ನಿಗದಿಪಡಿಸಿದ ತೆರಿಗೆ ಸಂಗ್ರಹದ ಗುರಿ ತಲುಪಲೇಬೇಕು ಎಂದು ಆರ್ಥಿಕ ಇಲಾಖೆಯು ಅಬಕಾರಿ ಇಲಾಖೆಯ ಮೇಲೆ ಒತ್ತಡ ಹಾಕುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮುಕ್ತವಾಗಿ ಮದ್ಯ ಮಾರಾಟವಾಗುತ್ತಿದೆ. ಬಡಕುಟುಂಬಗಳ ಮಹಿಳೆಯರು, ಮಕ್ಕಳು, ಕಾರ್ಮಿಕರು ಇದರ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಆರ್ಥಿಕ ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಬೇರೆ ಯಾವುದಾದರೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಡಿತಗೊಳಿಸಲಿ ಆದರೆ ಅಬಕಾರಿ ಮಾರಾಟಕ್ಕೆ ಗುರಿ ನಿಗದಿ ಮಾಡುವುದು ಬೇಡ ಎಂದರು.
ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇದು ಇಡೀ ರಾಜ್ಯದ ಸಮಸ್ಯೆಯಾಗಿದೆ. ಹಣಕಾಸು ಇಲಾಖೆಯ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಿ, ಮುಖ್ಯಮಂತ್ರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆರ್ಥಿಕ ಗುರಿ ನಿಗದಿಪಡಿಸದೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.
ನಂತರ ಅಬಕಾರಿ ಸಚಿವ ಕೆ.ಗೋಪಾಲಯ್ಯ ಉತ್ತರಿಸಿ, ಅಕ್ರಮ ಮದ್ಯ ಮಾರಾಟ ತಡೆಗೆ ಸರ್ಕಾರ ಬದ್ಧವಾಗಿದೆ. ಈ ಕುರಿತು ಉತ್ತರ ಕರ್ನಾಟಕದ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರ ಸಭೆಯನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ. ಸಂಡೂರು ತಾಲೂಕಿನಲ್ಲಿ ಅಕ್ರಮ ಮದ್ಯ ತಡೆಗೆ ಕಳೆದ ಮೂರು ವರ್ಷಗಳಲ್ಲಿ 231 ದಾಳಿಗಳನ್ನು ನಡೆಸಿ,ಅಕ್ರಮ ಮದ್ಯ ವಶಪಡಿಸಿಕೊಂಡು, 13 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.