ಚಿತ್ರದುರ್ಗ: ಇಲ್ಲಿನ ಚಿಕ್ಕಪೇಟೆ ಮಸೀದಿ ಬಳಿ ಮಾರಕಾಸ್ತ್ರಗಳೊಂದಿಗೆ ಅನುಮಾನಾಸ್ಪದವಾಗಿ ಮಾರುತಿ ಒಮ್ನಿ ಕಾರಿನಲ್ಲಿದ್ದ 8 ಮಂದಿ ದುಷ್ಕರ್ಮಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿ ಅವರ ಷಡ್ಯಂತ್ರವನ್ನು ಬಯಲಿಗೆ ಎಳೆಯಬೇಕು ಎಂದು ಸ್ಥಳೀಯ ನಿವಾಸಿ ಕಾಮ್ರಾನ್ ಅಲಿ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಡಿಸೆಂಬರ್ 17 ರಂದು ಬೆಳಿಗ್ಗೆ 10-45 ರ ಸಮಯದಲ್ಲಿ ಚಿತ್ರದುರ್ಗ ನಗರದ ಚಿಕ್ಕಪೇಟೆಯಲ್ಲಿರುವ ಜಾಮೀಯಾ ಮಸೀದಿ, ಕೋಟೆ ರಸ್ತೆ ಇಲ್ಲಿ ಮಾರುತಿ ಓಮಿನಿ ನಂ:ಕೆ.ಎ.17-ಜಡ್ 7507 ರ ವಾಹನದಲ್ಲಿ ಸುಮಾರು 6-7 ಜನ ಮಾರಕಾಸ್ತ್ರಗಳನ್ನು ತುಂಬಿಕೊಂಡು ಅನುಮಾನಸ್ಪದವಾಗಿ ಯಾರಿಗೋ ಹೊಂಚು ಹಾಕುವ ರೀತಿಯಲ್ಲಿ ಕಾಯುತ್ತ ನಿಂತಿದ್ದರು. ನಾನು ಎಂದಿನಂತೆ ಪ್ರತಿದಿನ ನನ್ನ ಅಂಗಡಿಗೆ ಹೋಗುವ ಸಮಯದಲ್ಲಿ ಕೋಹಿನೂರು ಬುರ್ಕಾ ಹೌಸ್ ಮುಂಭಾಗದಲ್ಲಿ ನಿಂತಿದ್ದ ವಾಹನದ ಆಸುಪಾಸು ಜನ ಸೇರಿರುವುದನ್ನು ಕಂಡು ಹೋಗಿ ನೋಡಿದರೆ ಆ ವಾಹನದಲ್ಲಿ 7-8 ಲಾಂಗ್ ಮಚ್ಚುಗಳು ಇದ್ದವು. ಇದನ್ನು ಕಂಡ ನಾನು ಪೊಲೀಸರಿಗೆ ಮಾಹಿತಿಯನ್ನು ತಿಳಿಸಲು ಮುಂದಾದಲ್ಲಿ ಅದೇ ಸಮಯಕ್ಕೆ ಅಲ್ಲಿ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ನಹೀಂ ಅವರು ಬಂದು ಅವರನ್ನು ಬಂಧಿಸಿದ್ದಾರೆ. ಸದರಿ ಬಡಾವಣೆಯಲ್ಲಿ ಯಾವುದೋ ದರೋಡೆ ಕೊಲೆಯ ಸಂಚು ರೂಪಿಸುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಒಬ್ಬ ಪ್ರಜ್ಞಾವಂತ ನಾಗರೀಕನಾಗಿ ಅದನ್ನು ತಡೆಯಲು ನಾನು ಪೊಲೀಸ್ ಇಲಾಖೆಗೆ ಈ ವಿಷಯವನ್ನು ತಿಳಿಸಿದ್ದೇನೆ. ಆದ್ದರಿಂದ ಕಾನೂನು ರೀತ್ಯ ಕ್ರಮವನ್ನು ಜರುಗಿಸಬೇಕು ಎಂದು ಕಾಮ್ರಾನ್ ಅಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.