ಬೆಂಗಳೂರು: ಶಾಲೆಯೊಂದರಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗಿರುವ ಬಗ್ಗೆ ಮುಖ್ಯೋಪಾಧ್ಯಾಯಿನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನವೆಂಬರ್ 29ರಂದು ಅರುಣ್ (ಹೆಸರು ಬದಲಿಸಲಾಗಿದೆ) ಎಂಬ ಬಾಲಕ ಕೈ ಕಾಲುಗಳಲ್ಲಿ ಗಾಯಗಳೊಡನೆ ಶಾಲೆಯಿಂದ ಮನೆಗೆ ಹಿಂದಿರುಗಿದ. ಆತನನ್ನು ಮನಬಂದಂತೆ ಥಳಿಸಲಾಗಿತ್ತು. ಪುಸ್ತಕ ಹರಿದಿದೆಯಲ್ಲ ಎಂಬ ಕಾರಣಕ್ಕೆ ತಮಿಳು ಸಂಘ ಕಾಮರಾಜರ್ ಹೈಸ್ಕೂಲಿನ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಮನ ಬಂದಂತೆ ಹೊಡೆದಿದ್ದಾರೆ ಎಂದು ಆತ ಮನೆಯವರಲ್ಲಿ ತಿಳಿಸಿದ. ಬೇಸರಗೊಂಡ ಮನೆಯವರು ಶಾಲೆಗೆ ಹೋಗಿ ಈ ಬಗ್ಗೆ ವಿಚಾರಿಸಿದಾಗ ಶಾಲೆಯವರು ಯಾವುದೇ ಉತ್ತರ ನೀಡದೆ ಜಾರಿಕೊಂಡಿದ್ದರು.
ಈ ಶಾಲೆಯಲ್ಲಿ ನಿರಂತರವಾಗಿ ದಲಿತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗುತ್ತಿರುವುದು ಬಳಿಕ ಬೆಳಕಿಗೆ ಬಂದಿದೆ. ದಲಿತ ವಿದ್ಯಾರ್ಥಿಗಳಿಂದ ಕಕ್ಕಸು ಸ್ವಚ್ಛಗೊಳಿಸುವುದರಿಂದ ಹಿಡಿದು ಇತರೆಲ್ಲ ಕೆಲಸಗಳನ್ನೂ ಬಲವಂತದಿಂದ ಮಾಡಿಸುವುದು ಸಹ ಈ ಶಾಲೆಯಲ್ಲಿ ಮಾಮೂಲು.
ವರದಿಗಾರರೊಡನೆ ಮಾತನಾಡಿದ ಶಾಲೆಯ ಹಲವು ವಿದ್ಯಾರ್ಥಿಗಳು, ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಸಿಬ್ಬಂದಿ ಮುಖ್ಯವಾಗಿ ದಲಿತ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದರ ಬಗ್ಗೆ ಹೇಳಿಕೆ ನೀಡಿದ್ದಾರೆ.
ಸಂಬಂಧಿಸದ ಕೆಲಸ ಮಾಡಲು ಹೇಳುವುದಲ್ಲದೆ, ವಿದ್ಯಾರ್ಥಿ ಮಾಡಲು ನಿರಾಕರಿಸಿದರೆ ಅವರನ್ನು ಹೊಡೆಯುತ್ತಿದ್ದರು ಇಲ್ಲವೇ ನಪಾಸು ಮಾಡುವುದಾಗಿ ಹೆದರಿಸುತ್ತಿದ್ದರು. ಅವರ ಮಾರ್ಕ್ಸ್ ಕಾರ್ಡ್ ಗಳನ್ನು ಹಿಡಿದಿಟ್ಟುಕೊಳ್ಳುವುದು, ಟ್ರಾನ್ಸ್ ಫರ್ ಸರ್ಟಿಫಿಕೇಟ್ ನೀಡಿ ಕಳುಹಿಸುವುದಾಗಿ ಬೆದರಿಸುವುದೆಲ್ಲ ಈ ಶಾಲೆಯಲ್ಲಿ ಸಾಮಾನ್ಯ ಸಂಗತಿಯೆನಿಸಿದೆ.
ನಮ್ಮನ್ನು ಸದಾ ಕೆಟ್ಟದ್ದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆ ಶಾಲೆಯ ದಲಿತ ವಿದ್ಯಾರ್ಥಿಗಳು ವರದಿಗಾರರಲ್ಲಿ ಅಲವತ್ತುಕೊಂಡರು. ಶಾಲೆಯ ಜವಾನನು ನನ್ನನ್ನು ದನ ತಿನ್ನೋನೆ ಎಂದು ಬೈದ ಎಂದು ಒಬ್ಬ ವಿದ್ಯಾರ್ಥಿ ಆರೋಪಿಸಿದ್ದಾನೆ. ಶಾಲೆ ಮರು ಆರಂಭವಾದಾಗ ಒಬ್ಬ ವಿದ್ಯಾರ್ಥಿ ಒಂದು ಹನಿ ಸ್ಯಾನಿಟೈಸರನ್ನು ಕೆಳಕ್ಕೆ ಚೆಲ್ಲಿದ. ಜವಾನನು ಬಂದು ಆತನು ಮುಖಕ್ಕೆ ಹೊಡೆದು ಹೊಟ್ಟೆಗೆ ಏನು ತಿನ್ನುತ್ತಿ ನೀನು ಎಂದು ಕೇಳಿದ. ಸ್ವಲ್ಪ ತಡೆದು ನೀವು ದನ ತಿನ್ನುವವರು, ದೂರ ನಿಲ್ಲಿ ಎಂದು ಬೈದ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಾರೆ.
ಇನ್ನೊಂದು ಸಂದರ್ಭ, ಒಬ್ಬ ವಿದ್ಯಾರ್ಥಿಗೆ ಇತರ ವಿದ್ಯಾರ್ಥಿಗಳಿಗೆ ರೇಶನ್ ಅಕ್ಕಿ ಹಂಚುವಂತೆ ಹೇಳಲಾಯಿತು. ಆ ವಿದ್ಯಾರ್ಥಿ ಚೀಲಕ್ಕೆ ತುಂಬುವಾಗ ಕೆಲವು ಕಾಳುಗಳು ಕೆಳಕ್ಕೆ ಬಿದ್ದವು. ಕೂಡಲೆ ಜವಾನ ಕೆಟ್ಟ ಭಾಷೆಯಲ್ಲಿ ಬಯ್ಯುತ್ತ ಬಂದು ಆ ವಿದ್ಯಾರ್ಥಿಯತ್ತ ಕೆಕ್ಕರಿಸಿದ.
ಈ ಶಾಲೆಯಲ್ಲಿ ನಾನಾ ರೀತಿಯಲ್ಲಿ ಕೆಟ್ಟದಾಗಿ ನಡೆಸಿಕೊಳ್ಳುವುದು ಮತ್ತು ತೊಂದರೆ ಕೊಡುವುದು, ಜಾತಿ ಮತ್ತು ಆಹಾರದಲ್ಲಿ ಹಳಿಯುವುದು ನಡೆಯುತ್ತಲೇ ಇರುತ್ತದೆ. ಡಿಸೆಂಬರ್ 9ರಂದು ಕೆಲವು ವಿದ್ಯಾರ್ಥಿಗಳ ಪೋಷಕರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದರು. ಪಾಲಕರು, ಹೆತ್ತವರು ನೀಲಿ ಶಾಲುಗಳನ್ನು ಹೊದ್ದು, ಬೀಸುತ್ತ, ದಲಿತ ಮಕ್ಕಳು ನಿಮ್ಮ ದಾಸ್ಯಗಳಲ್ಲ ಎಂದು ಘೋಷಣೆ ಕೂಗಿದರು. ನಮ್ಮ ಮಕ್ಕಳಿಂದ ಮಧ್ಯಾಹ್ನದ ಬಿಸಿಯೂಟದ ಪಾತ್ರೆ ಪರಡಿ ತೊಳೆಸಲಾಗುತ್ತದೆ. ಶಾಲೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ಬಾತ್ ರೂಂ ತೊಳೆಸಲಾಗುತ್ತದೆ ಎಂದು ಹೆತ್ತವರು ಆಕ್ರೋಶ ವ್ಯಕ್ತಪಡಿಸಿದರು.
ಅರುಣ್ ವಿಷಯದಲ್ಲಿ ಆತನ ಕೈಗೆ ಲೋಹದಿಂದ ಹೊಡೆದಿರುವುದರಿಂದ ತೀವ್ರ ಗಾಯವಾಗಿತ್ತು. ಆತನ ಹೆತ್ತವರು ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯವರ ಜೊತೆಗೆ ಸೇರಿ ಶಾಲೆಯೆದುರು ಧರಣಿ ನಡೆಸಿದರು. ಕೂಡಲೆ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಅಮಾನತು ಮಾಡಬೇಕು. ಆಕೆಯ ಮೇಲೆ ಎಸ್ ಸಿ/ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
“ದಲಿತ ಮಕ್ಕಳು ಇಲ್ಲಿ ಓದಲೆಂದು ಬರುತ್ತಾರೆ. ಆದರೆ ಶಾಲಾಡಳಿತವು ಅವರಿಂದ ಶಾಲಾ ವಠಾರ ಸ್ವಚ್ಛಗೊಳಿಸುವ ಮತ್ತು ಪಾತ್ರೆ ತೊಳೆಸುವ ಹಾಗೂ ಲ್ಯಾವೆಟರಿ ಉಜ್ಜಿಸುವ ಕೆಲಸ ಮಾಡಿಸುತ್ತದೆ. ಯಾವುದಾದರೂ ವಿದ್ಯಾರ್ಥಿ ಆ ಕೆಲಸ ಮಾಡಲು ನಿರಾಕರಿಸಿದರೆ ಆತನಿಗೆ ಹೊಡೆಯಲಾಗುತ್ತದೆ. ಅದಕ್ಕಾಗಿ ನಾವಿಲ್ಲಿ ಬಂದು ಪ್ರತಿಭಟಿಸುತ್ತಿದ್ದೇವೆ. ಇದಕ್ಕೆಲ್ಲ ಶಾಲಾ ಮುಖ್ಯೋಪಾಧ್ಯಾಯಿನಿಯೇ ಕಾರಣ ಮತ್ತು ಜವಾಬ್ದಾರರು. ಆಕೆ ವಿದ್ಯಾರ್ಥಿಗಳನ್ನು ಮನಬಂದಂತೆ ಹೊಡೆಯುತ್ತಿದ್ದಾಳೆ ಎಂದು ಬೆಂಗಳೂರು ನಗರ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಜಿ. ಮದಿಯರಸನ್ ಹೇಳುತ್ತಾರೆ.
ತೀರಾ ಬಡ ಕುಟುಂಬಗಳಿಂದ ಬಂದ ಎಲ್ಲ ದಲಿತ ವಿದ್ಯಾರ್ಥಿಗಳೂ ವರದಿಗಾರರ ಜೊತೆ ಈ ಅನ್ಯಾಯಗಳ ಬಗ್ಗೆ ಮಾತನಾಡಿದರು. ಅವರಲ್ಲಿ ಬಹಳಷ್ಟು ಜನರು ತಮಿಳುನಾಡಿನ ಬೇರೆ ಬೇರೆ ಭಾಗಗಳಿಂದ ಬಂದಿದ್ದು, ಇಲ್ಲಿ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಇರುತ್ತಾರೆ. ಬೆಂಗಳೂರಿನವರೇ ಆದ ವಿದ್ಯಾರ್ಥಿಗಳ ಹೆತ್ತವರು ಕೂಲಿ ಕಾರ್ಮಿಕರಾಗಿ ದುಡಿಯುವವರಾಗಿದ್ದಾರೆ. ದಲಿತ ವಿದ್ಯಾರ್ಥಿಗಳ ಸ್ಥಿತಿಗತಿಯ ಮೇಲೆಯೇ ಅವರನ್ನು ಶೋಷಿಸಲಾಗುತ್ತದೆ.
ಸದರಿ ವಿಷಯವಾಗಿ ಬೆಂಗಳೂರು ತಮಿಳ್ ಸಂಘಂ ಕಾಮರಾಜರ್ ಹೈಸ್ಕೂಲ್ ಪ್ರಿನ್ಸಿಪಾಲ್ ರನ್ನು ಈ ವಿಷಯವಾಗಿ ಕೇಳಿದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಈ ಸಂಬಂಧವಾಗಿ ಕೆ. ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಮತ್ತು ಶ್ರೀಕಂಠಮೂರ್ತಿ ಎಂಬ ಸಿಬ್ಬಂದಿ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ, ಮಕ್ಕಳ ಸಂರಕ್ಷಣೆ ಮತ್ತು ಕಾಳಜಿಯ ಬಾಲ ರಕ್ಷಣಾ ಕಾಯ್ದೆ, ಹಲವರಿಂದ ನಿಶ್ಚಿತ ಹಾನಿಯ ಭಾರತೀಯ ದಂಡ ಸಂಹಿತೆ ಕ್ರಿಮಿನಲ್ ವಿಧಿ 34, ವ್ಯಕ್ತಿಗತ ಹಾನಿ ಎಸಗುವುದರ ಬಗೆಗಿನ ವಿಧಿ 323, ಅಪಾಯಕಾರಿ ಆಯುಧಗಳಿಂದ ತೊಂದರೆಗೀಡು ಮಾಡುವುದು ವಿಧಿ 324 ಇವುಗಳೆಲ್ಲದರಡಿ ಪೋಲೀಸರು ಕ್ರಮ ಕೈಗೊಳ್ಳಲು ಆ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ಕೃಪೆ: ದಿ ನ್ಯೂಸ್ ಮಿನಿಟ್.ಕಾಮ್)