ಶಾಹಿ ಈದ್ಗಾ ಮಸೀದಿಯಲ್ಲಿ ನಮಾಝ್ ನಿಷೇಧಿಸಲು ಕೋರಿ ಮಥುರಾ ನ್ಯಾಯಾಲಯಕ್ಕೆ ಮನವಿ

Prasthutha|

ಮಥುರಾ: ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಶಾಹಿ ಈದ್ಗಾ ಮಸೀದಿ ಮತ್ತು ಅದಕ್ಕೆ ಸೇರಿದ ರಸ್ತೆಯಲ್ಲಿ ನಮಾಝ್ ಮಾಡುವುದಕ್ಕೆ ನಿಷೇಧ ಹೇರುವಂತೆ ಕೋರಿ ಮಥುರಾ ನ್ಯಾಯಾಲಯದಲ್ಲಿ ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಯು ಮನವಿ ಸಲ್ಲಿಸಿದೆ.

- Advertisement -


ಹಿಂದುತ್ವ ಸಂಘಟನೆಯ ಅಧ್ಯಕ್ಷ ಮನವಿ ಸಲ್ಲಿಸಿದ್ದು ಅವರನ್ನು ಪ್ರತಿನಿಧಿಸಿರುವ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಅವರು “ಈದ್ಗಾ ಮಸೀದಿಯ ಒಳಗೆ ನಮಾಝ್ ಮಾಡಲಾಗುತ್ತಿರಲಿಲ್ಲ. ಆದರೆ, ಕಳೆದ ಕೆಲವು ವರ್ಷಗಳಿಂದ ಮಸೀದಿಯ ಒಳಗೆ ನಮಾಝ್ ಮಾಡಲಾಗುತ್ತಿದ್ದು, ಅದಕ್ಕೆ ನಿಷೇಧ ಹೇರಬೇಕು” ಎಂದು ಮನವಿಯಲ್ಲಿ ವಿವರಿಸಿದ್ದಾರೆ.

“ಆಕ್ಷೇಪಿತ ಸ್ಥಳವು ಹಿಂದೂ ಪಕ್ಷಕಾರರಿಗೆ ಸೇರಿದ್ದು, ಈದ್ಗಾ ಮಸೀದಿಯಲ್ಲಿ ನಮಾಝ್ ಮಾಡಲಾಗುತ್ತಿರಲಿಲ್ಲ. ಆದರೆ, ಕಳೆದ ಕೆಲವು ವರ್ಷಗಳಿಂದ ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ ಮತ್ತು ಕಾನೂನುಬಾಹಿರವಾಗಿ ದಿನಕ್ಕೆ ಐದು ಬಾರಿ ನಮಾಝ್ ಮಾಡುತ್ತಿದ್ದಾರೆ. ಪವಿತ್ರ ಕುರ್ ಆನಲ್ಲೂ ವಿವಾದಿತ ಸ್ಥಳದಲ್ಲಿ ನಮಾಝ್ ಮಾಡಬಾರದು ಎಂದು ಹೇಳಲಾಗಿದೆ. ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ ಕೋಮು ಶಾಂತಿಗೆ ಧಕ್ಕೆ ಉಂಟು ಮಾಡಲು ಪ್ರಯತ್ನ ಮಾಡುತ್ತಿದ್ದು, ಇದರ ಜೊತೆಗೆ ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದಾರೆ…” ಎಂದು ಹೇಳಿದ್ದಾರೆ.

- Advertisement -


1669ರಲ್ಲಿ ಕೃಷ್ಣ ದೇವಸ್ಥಾನವನ್ನು ನಾಶಪಡಿಸಿ ವಿವಾದಿತ ಸ್ಥಳದಲ್ಲಿ ಔರಂಗಜೇಬ್ ಮಸೀದಿ ನಿರ್ಮಿಸಿದ್ದಾನೆ. ಮಸೀದಿಯ ಗೋಡೆಗಳಲ್ಲಿ ಇನ್ನೂ ಹಿಂದೂ ಧಾರ್ಮಿಕ ಚಿಹ್ನೆಗಳಿವೆ ಎಂದು ಹೇಳಲಾಗಿದೆ.


“ಹಿಂದೂ ಧರ್ಮಗ್ರಂಥಗಳನ್ನು ಉಲ್ಲೇಖಿಸಿರುವ ಹಲವು ಶಿಲೆಗಳು ಕಾಣಸಿಗುತ್ತವೆ. ಔರಂಗಜೇಬ್ ಆದೇಶದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ನಾಶಪಡಿಸಿ ಮಸೀದಿ ನಿರ್ಮಿಸಲಾಗಿದೆ” ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ. ಜನವರಿ ಮೊದಲ ವಾರದಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ.


(ಕೃಪೆ: ಬಾರ್ & ಬೆಂಚ್)



Join Whatsapp