ಬೆಳಗಾವಿ: 2020-21ನೇ ಸಾಲಿನಲ್ಲಿ ರಾಜ್ಯ ಸರಕಾರದ ಒಟ್ಟು ಸಾಲ ₹96,509 ಕೋಟಿ ರೂ. ಸೇರ್ಪಡೆಯಾಗಿದೆ. ವಿಧಾನಸಭೆಯಲ್ಲಿ ಮಂಗಳವಾರ ಮಂಡನೆಯಾದ ಹಣಕಾಸು ಲೆಕ್ಕಪತ್ರ ಸಂಬಂಧ ಮಹಾಲೇಖಪಾಲರ ವರದಿಯಲ್ಲಿಈ ಅಂಶ ದಾಖಲಾಗಿದೆ. 2020-21ನೇ ಸಾಲಿನಲ್ಲಿ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ, ರಾಜ್ಯ ಸರಕಾರ ಒಟ್ಟು ₹61,900 ಕೋಟಿ ರೂ. ಮಾರುಕಟ್ಟೆ ಸಾಲ ಪಡೆದಿದೆ.
ರಾಜ್ಯ ಸರಕಾರವು ಕೊರೊನಾ ಲಾಕ್ಡೌನ್ ಸಮಯದಲ್ಲಿ ಉಂಟಾಗಿದ್ದ ಆದಾಯದ ಕೊರತೆ ಸರಿದೂಗಿಸಲು ಹೆಚ್ಚುವರಿ ಸಾಲ ಮಾಡಿದೆ. ಇದು ಒಟ್ಟಾರೆ ಸಾಲದ ಪ್ರಮಾಣದಲ್ಲಿ ಏರಿಕೆಗೆ ಕಾರಣವಾಗಿದೆ.ಕೊರೊನಾದಿಂದ ಜಿಎಸ್ಟಿ ಆದಾಯದಲ್ಲೂ ಕೊರತೆಯಾಗಿತ್ತು. ಇದರ ಜತೆಗೆ ಕೇಂದ್ರ ಸರಕಾರವು ಜಿಎಸ್ಟಿ ಪರಿಹಾರವನ್ನು ಸಾಲದ ರೂಪದಲ್ಲಿ ನೀಡಲು ನಿರ್ಧರಿಸಿತ್ತು. ಇದರಿಂದ ಸಾಲದ ಹೊರೆ 18 ಸಾವಿರ ಕೋಟಿಯಾಗಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ಕುಸಿತವು, ಈ ಬಾರಿಯ ಸಾಲದ ಹೊರೆಯ ಹೆಚ್ಚಳಕ್ಕೆ ಕಾರಣವಾಗಿದೆ. ರಾಜ್ಯದ ಆದಾಯದ ಮೂಲಗಳಲ್ಲೂ ಕುಸಿತವಾಗಿದ್ದು, ಜಿಎಸ್ಟಿ 2019-20ರಲ್ಲಿ ₹42.147 ಕೋಟಿ ರೂ.ಗಳಿಂದ 2020-21ರಲ್ಲಿ ₹37.711 ಕೋಟಿ ರೂ.ಗಳಿಗೆ ಇಳಿದಿದೆ. ಸರಕಾರದ ವಿವಿಧ ಆದಾಯದ ಮೂಲಗಳಾದ ರಾಜ್ಯ ಅಬಕಾರಿ, ನೋಂದಣಿ ಶುಲ್ಕ ಹಾಗೂ ಇತರ ತೆರಿಗೆಗಳು ಕೂಡ ಕಡಿಮೆಯಾಗಿದೆ. ಹೀಗಾಗಿ ಸರಕಾರದ ಸಾಲವು ವರ್ಷದಲ್ಲಿ ₹96,509 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಇದರಲ್ಲಿ ₹18,421 ಕೋಟಿ ರೂ. ಬಜೆಟ್ ಸಾಲವೂ ಒಳಗೊಂಡಿದೆ ಎಂದು ವರದಿ ಹೇಳಿದೆ.