ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡ ನಂತರ ಆಯಾ ಪಾಲಿಕೆಗಳೇ ಬೀದಿ ದೀಪ, ರಸ್ತೆ ಸೇರಿದಂತೆ ಹಲವಾರು ಕಾಮಗಾರಿಗಳನ್ನು ನಿರ್ವಹಣೆ ಮಾಡಲಿವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ತಿಪ್ಪೆಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಮಾರ್ಟ್ ಸಿಟಿ ಕಾಮಗಾರಿಯೂ ಶೇ.72ರಷ್ಟು ಪೂರ್ಣಗೊಂಡಿವೆ. ಕಾಮಗಾರಿ ಮುಗಿದ ಮೇಲೆ ಯಾರು ನಿರ್ವಹಣೆ ಮಾಡುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಬಹುತೇಕ ಆಯಾ ಮಹಾನಗರ ಪಾಲಿಕೆಗಳೇ ಕಾಮಗಾರಿಗಳನ್ನು ನಿರ್ವವಣೆ ಮಾಡಲಿವೆ ಎಂದು ಮಾಹಿತಿ ನೀಡಿದರು.
ಸ್ಮಾರ್ಟ್ ಯೋಜನೆ ಜಾರಿಯಲ್ಲಿರುವ ನಗರಗಳಿಗೆ ಹಲವು ಬಾರಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಇನ್ನೂ, ರಾಜ್ಯದಲ್ಲಿ ಏಳು, ದೇಶದಲ್ಲಿ 110 ಸ್ಮಾರ್ಟ್ ಸಿಟಿ ಯೋಜನೆಗಳು ಜಾರಿಯಲ್ಲಿವೆ. ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಬೆಳಗಾವಿಗೆ 570 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ ಹಿರಿಯ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರ ಉಡುಪಿ ನೀರಾವರಿ ಯೋಜನೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಉಡುಪಿ ನಗರಕ್ಕೆ ಶುದ್ಧ ಕುಡಿಯುವ ನೀರಿನ ಯೋಜನೆ 2023 ವರ್ಷಕ್ಕೆ ಪೂರ್ಣಗೊಳಿಸುವ ಉದ್ದೇಶವಿದೆ.
ಮುಖ್ಯವಾಗಿ ವರಾಹಿ ನಾಲೆ ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದೆ. ಹಾಗಾಗಿ ನದಿ ಮೂಲದಿಂದ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಖಾಸಗಿ ಕಂಪೆನಿಯ ವಿದ್ಯುತ್ ಉತ್ಪಾದನೆಗೆ ಸಹಕರಿಸುವ ಉದ್ದೇಶ ಈ ಯೋಜನೆಯಲ್ಲಿ ಇಲ್ಲ. ನೀರು ಹರಿಸುವ ಮಾರ್ಗ ಮಧ್ಯೆ 23 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಸದನಕ್ಕೆ ತಿಳಿಸಿದರು.
ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಂಡ ಬಳಿಕ ಪಾಲಿಕೆಗಳಿಗೆ ಬೀದಿ ದೀಪ, ರಸ್ತೆ ನಿರ್ವಹಣೆ ಜವಾಬ್ದಾರಿ: ಸಚಿವ ಭೈರತಿ ಬಸವರಾಜು
Prasthutha|