ಅಶಕ್ತರ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ವಿತರಣೆ: ಸಚಿವ ಆರ್.ಅಶೋಕ

Prasthutha|

ಬೆಳಗಾವಿ: ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಈಗಾಗಲೇ 27 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಅಂಚೆ ಕಚೇರಿ ಮೂಲಕ ಪಿಂಚಣಿ ಒದಗಿಸಲಾಗುತ್ತಿದ್ದು, ಅಶಕ್ತರಿಗೆ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

- Advertisement -

ಸೋಮವಾರ ವಿಧಾನಸಭೆಯಲ್ಲಿ ಶಾಸಕ ಬಂಡೆಪ್ಪ ಖಾಶೆಂಪೂರ್ ಅವರ ಪ್ರಶ್ನೆಗೆ ಉತ್ತರಿಸಿ, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ ನೇರವಾಗಿ ಪಿಂಚಣಿಯನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆದು, ಮನೆ ಬಾಗಿಲಿಗೆ ಪಿಂಚಣಿ ಒದಗಿಸಲು ಮನವಿ ಸಲ್ಲಿಸಿದರೆ ಈ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದರು.

ರಾಜ್ಯದಲ್ಲಿ ಬೋಗಸ್ ಕಾರ್ಡ್ ಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಕಳೆದ ವರ್ಷ 4 ಲಕ್ಷ ಬೋಗಸ್ ಕಾರ್ಡುಗಳನ್ನು ರದ್ದುಪಡಿಸಿರುವುದರಿಂದ 475 ಕೋಟಿ ರೂ.ಉಳಿತಾಯವಾಗಿದೆ. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಬಿಪಿಎಲ್ ಪಡಿತರದಾರರ ಮಾಹಿತಿ ಲಭ್ಯವಿದ್ದು, ಅಂತವರಿಗೆ ನೇರವಾಗಿ ಪಿಂಚಣಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.



Join Whatsapp