ನಮ್ಮ ದೇಶದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವು ನಮ್ಮೊಳಗನ್ನು ತಿವಿಯದಿದ್ದರೆ ನಮ್ಮಷ್ಟು ಆತ್ಮದ್ರೋಹಿಗಳು ಇನ್ನೊಬ್ಬರು ಇರಲಾರಲಾರರು. ನೀವು ಆತ್ಮದ್ರೋಹಿಯಾದರೆ ದೇಶದ್ರೋಹಿ ಆಗಿಯೇ ಆಗ್ತೀರಾ.
ನಮ್ಮಲ್ಲಿ ಬಸ್ಸು ಬಿದ್ದರೆ ಸಾರಿಗೆ ಸಚಿವ, ರೈಲು ಹಳಿ ತಪ್ಪಿ ಜನ ಸಾವನ್ನಪ್ಪಿದ್ದರೆ ರೈಲ್ವೇ ಸಚಿವ ರಾಜೀನಾಮೆ ನೀಡಿದ ಉದಾಹರಣೆಗಳಿವೆ. ಆದರೆ ದೇಶದ ಅತ್ಯುನ್ನತ ಭದ್ರತಾ ಅಧಿಕಾರಿ ವಾಯು ಸೇನೆಯ ಅತ್ಯುನ್ನತ ಹೆಲಿಕಾಪ್ಟರ್ ಪತನವಾಗಿ ಸಾವನ್ನಪ್ಪಿದ್ದಕ್ಕೆ ಕೇಂದ್ರದ ರಕ್ಷಣಾ ಸಚಿವರು ರಾಜೀನಾಮೆ ಘೋಷಣೆ ಮಾಡಿದ್ರಾ ?
ಭಾರತೀಯ ಸರ್ವಸೇನಾ ಮುಖ್ಯಸ್ಥ ಹೆಲಿಕಾಪ್ಟರ್ ನಲ್ಲಿ ಹೋಗುವಾಗ ಅದಕ್ಕೊಂದು ಪೈಲೆಟ್ ಹೆಲಿಕಾಪ್ಟರ್, ಎಸ್ಕಾರ್ಟ್ ಹೆಲಿಕಾಪ್ಟರ್ ಇರಬೇಕು ಎಂಬ ನಿಯಮ ಇಲ್ಲವೇ ?
ಸೇನೆಯ ಮುಖ್ಯಸ್ಥ ಪ್ರಯಾಣಿಸುವ ಹೆಲಿಕಾಪ್ಟರ್ ಬಿದ್ದ ತಕ್ಷಣ ಘಟನಾ ಸ್ಥಳಕ್ಕೆ ಸೇನೆ, ಪೊಲೀಸರು ದೌಡಾಯಿಸುತ್ತಾರೆ. ಸುಟ್ಟ ಸ್ಥಿತಿಯಲ್ಲಿದ್ದ ಸೇನಾ ಮುಖ್ಯಸ್ಥರನ್ನು ಕೊಂಡೊಯ್ಯಲು ಒಂದು ಸ್ಟ್ರೆಚರ್ ಗೂ ಗತಿ ಇರಲಿಲ್ಲವೇ ? ಬೆಡ್ ಶೀಟ್ ನಲ್ಲಿ ಹೊದ್ದುಕೊಂಡು ಸೇನಾ ಮುಖ್ಯಸ್ಥರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ ಎಂದರೆ ನಿಜವಾದ ಭಾರತೀಯರಿಗೆ ಎದೆಯೊಳಗೆ ಉರಿಯದೇ ಇರುತ್ತಾ ?
ಸುರತ್ಕಲ್ ಪಕ್ಕ ಮದ್ಯ ಎಂಬ ಗ್ರಾಮದಲ್ಲಿ ಕೊರಗ ಸಮುದಾಯದ ಕಾಲನಿ ಇದೆ. ಸುಮಾರು 35 ರಷ್ಟು ಕುಟುಂಬಗಳಿರುವ ಆ ಹಳ್ಳಿಯಲ್ಲಿ ಕಳೆದ ಕೆಲ ವರ್ಷಗಳಲ್ಲಿ ಹತ್ತಾರು ಜನ ಸತ್ತಿದ್ದಾರೆ. ಯಾಕೆ ಸತ್ರು ಅಂತ ಊರವರನ್ನು ಕೇಳಿದರೆ ಎಲ್ಲರೂ ಸಹಜವಾಗಿಯೇ ಅಯುಷ್ಯ ಮುಗಿದು ಸತ್ರು ಅಂತಾರೆ. ವಾಸ್ತವವಾಗಿ ಸತ್ತವರೆಲ್ಲರೂ ಅಪೌಷ್ಟಿಕತೆ, ಸೂಕ್ತ ಚಿಕಿತ್ಸೆ, ಅರೈಕೆಗಳಿಲ್ಲದೆ ಬಡತನದಿಂದ ಸತ್ತವರಾಗಿದ್ದಾರೆ. ಅದನ್ನು ಹೇಳೋಕೆ ಹಳ್ಳಿಯವರಿಗೆ ಗೊತ್ತಾಗಲ್ಲ. ಇದು ಇಡೀ ದೇಶದ ಇವತ್ತಿನ ಪರಿಸ್ಥಿತಿ.
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವು ಭಾರತೀಯರಿಗೆ ಒಂದು ಹೆಲಿಕಾಪ್ಟರ್ ದುರಂತವಷ್ಟೆ. ಈ ದುರಂತವನ್ನು ಚೀನಾ, ಅಮೇರಿಕಾ, ಇಂಗ್ಲಂಡ್ ನೆಲದಲ್ಲಿ ನಿಂತು ನೋಡುವವರು “ಭಾರತದ ದಟ್ಟ ದಾರಿದ್ಯ”ಕ್ಕೆ ಲೊಚಗುಟ್ಟುತ್ತಾರೆ.
ಭಾರತದ ಈ ದಾರಿದ್ರ್ಯಕ್ಕೆ ಕಾರಣರು ಯಾರು ? ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರ ದಾರುಣ ಸಾವು ಭಾರತೀಯರ, ಭಾರತದ ಅಸ್ತಿತ್ವದ ಸಾವು. ಈ ಸಾವಿನ ಕಾರಣವನ್ನು ಪ್ರಶ್ನಿಸದೇ, ಆತ್ಮಾವಲೋಕನ ಮಾಡಿಕೊಳ್ಳದೇ ಇದ್ದರೆ ಸತ್ತಹೋಗಿರೋ ದೇಶದಲ್ಲಿ ನಾವೂ ಸತ್ತಿದ್ದೇವೆ ಎಂದು ಅರ್ಥ.