ಮಂಜೇಶ್ವರ: ಡಿಸೆಂಬರ್ 6 ರಂದು ಬಾಬರಿ ಮಸ್ಜಿದ್ ಧ್ವಂಸ ಮತ್ತು ಅನ್ಯಾಯದ ತೀರ್ಪಿಗೆದುರಾಗಿ, ಬಾಬರಿ ಮಸ್ಜಿದ್ ನೆನಪನ್ನು ಹಸಿರಾಗಿಸುವ ಹಾಗೂ ಪುನರ್ ನಿರ್ಮಿಸುವ ಧ್ಯೇಯದೊಂದಿಗೆ ದೇಶಾದ್ಯಂತ ಜನತೆ ‘ನಾನು ಬಾಬರಿ’ ಎಂಬ ಘೋಷಣೆಯೊಂದಿಗೆ ಬೀದಿಗಿಳಿದಿತ್ತು.
ಸಾಕ್ಷ್ಯಾಧಾರಗಳ ಕೊರತೆಯ ಮಧ್ಯೆಯೂ ಬಹುಸಂಖ್ಯಾತರ ನಂಬಿಕೆಯ ಮೇಲೆ ನೀಡಲಾದ ಅನ್ಯಾಯದ ತೀರ್ಪಿನ ವಿರುದ್ಧ ಪ್ರತಿಭಟನೆಗಳು ರಾಷ್ಟ್ರಾದ್ಯಂತ ನಡೆದಿದ್ದವು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದೇ ಅತ್ಯಂತ ಶಾಂತವಾಗಿ, ಸಂವಿಧಾನ ಬದ್ಧವಾಗಿ ನಡೆದ ಕಾರ್ಯಕ್ರಮಗಳನ್ನು ಕಂಡು ಜನತೆಯ ಪ್ರತಿಭಟನೆಯ ಕಾವು ಅರಿತ ಸಂಘಪರಿವಾರ ಜಿಲ್ಲೆಯಲ್ಲಿ ಕೋಮು ಗಲಭೆಯ ಹುನ್ನಾರ ನಡೆಸುತ್ತಿರುವುದರ ಸ್ಪಷ್ಟ ನಿದರ್ಶನವೇ ಬ್ಯಾಡ್ಜ್ ವಿವಾದ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಜೇಶ್ವರ ಡಿವಿಷನ್ ಸಮಿತಿಯ ಕಾರ್ಯದರ್ಶಿ ಮುಹಮ್ಮದ್ ಅಲಿ ಮೀಯಪದವು ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶಾದ್ಯಂತ ಹಲವಾರು ರೀತಿಯ ಷಡ್ಯಂತರಗಳನ್ನು ನಡೆಸಿ ಜನ ಸಾಮಾನ್ಯರ ಮಧ್ಯೆ ಕೋಮುವಾದದ ವಿಷವನ್ನು ಬಿತ್ತಿ ಆ ಮೂಲಕ ಕೋಮು ಗಲಭೆಗಳನ್ನೂ, ಗುಂಪು ಹತ್ಯೆಗಳನ್ನೂ ನಿರಂತರವಾಗಿ ನಡೆಸುತ್ತಿರುವ ಸಂಘಪರಿವಾರವು ತಮ್ಮ ಆಜೆಂಡಾವನ್ನು ದಕ್ಷಿಣ ಭಾರತಕ್ಕೆ ವಿಸ್ತರಿಸುವ ಹುನ್ನಾರದ ಭಾಗವಾಗಿದೆ ಈ ವಿವಾದ.
ಇಂತಹ ಷಡ್ಯಂತರಗಳನ್ನು ಜನಪರವಾಗಿಯೂ, ಸಂವಿಧಾನಬದ್ಧವಾಗಿಯೂ ಪ್ರತಿರೋಧಿಸಲು ಪಾಪ್ಯುಲರ್ ಫ್ರಂಟ್ ಸನ್ನದ್ಧವಾಗಿದೆ. ಅದರ ಜತೆಯಲ್ಲಿಯೇ ಶಾಂತವಾಗಿರುವ ನಾಡಿನಲ್ಲಿ ಕೋಮು ದಳ್ಳುರಿಗೆ ಶತಾಯಗತಾಯ ಪ್ರಯತ್ನಿಸುತ್ತಿರುವ ದೇಶದ್ರೋಹಿ ಸಂಘ ಪರಿವಾರ ಭಯೋತ್ಪಾದಕರ ಕುಟಿಲ ಕುತಂತ್ರಗಳನ್ನು ನಾಡಿನ ಜನತೆ ಅರ್ಥೈಸಬೇಕೆಂದೂ ಆ ಮೂಲಕ ಇಂತಹ ಅಜೆಂಡಾಗಳನ್ನು ಜನಪರವಾಗಿ ಸೋಲಿಸಬೇಕು ಎಂದು ಮುಹಮ್ಮದ್ ಅಲಿ ಮೀಯಪದವು ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.