ಬೆಡ್, ಔಷಧಿ, ಹೆಣದ ಮೇಲೂ ಹಣ ವಸೂಲಿ ಮಾಡುತ್ತಿರುವ ರಾಜ್ಯ ಸರ್ಕಾರ: ಡಿ.ಕೆ.ಶಿವಕುಮಾರ್ ವಾಗ್ದಾಳಿ

Prasthutha|

ಚಿಕ್ಕಮಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಬೆಡ್, ಔಷಧಿ, ಹೆಣದ ಮೇಲೂ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ಸಾಮಾಜಿಕ, ಪರಿಸರ, ರಾಜಕೀಯ ಹಾಗೂ ಧಾರ್ಮಿಕವಾಗಿ ಬಹಳ ಹೆಸರು ಸಂಪಾದಿಸಿದೆ. ಎಲ್ಲ ನಾಯಕರೂ ಶಿಸ್ತಿನ ಚೌಕಟ್ಟಿನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇದು ತವರು ಇದ್ದಂತೆ. ಮಧ್ಯೆ ಸ್ವಲ್ಪ ಏರು-ಪೇರಾಗಿತ್ತು. ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸಲು ಆರಂಭವಾಗಿದ್ದು, ಬಿಜೆಪಿ, ಜೆಡಿಎಸ್ ನಾಯಕರು ಹಾಗೂ ಮತದಾರರು ಬದಲಾವಣೆ ಬಯಸಿದ್ದಾರೆ. ಈ ರಾಜ್ಯಕ್ಕೆ ಶಕ್ತಿ ತುಂಬಬೇಕು. ಆಡಳಿತದಲ್ಲಿ ರಾಜ್ಯ ಕುಸಿದಿದೆ. ಕೇಂದ್ರ ಸರಕಾರವೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದರು.


ರಾಜ್ಯದಲ್ಲಿ ಯಾವುದೇ ಸರ್ಕಾರಿ ಕಚೇರಿಗೆ ಹೋಗಿ ಟೇಬಲ್ ಗುದ್ದಿದರೆ ಕಾಸು ಕೇಳುತ್ತಾರೆ. ಇಂತಹ ದುಸ್ಥಿತಿ ನಿರ್ಮಾಣವಾಗಿದೆ. ಇದು ಸರ್ಕಾರ ಸೃಷ್ಟಿಸಿರುವ ಪರಿಸ್ಥಿತಿ. ಬಿಜೆಪಿಯ ಹಿರಿಯ ನಾಯಕರಾದ ಯತ್ನಾಳ್ ಹಾಗೂ ವಿಶ್ವನಾಥ್ ಅವರು ಸರ್ಕಾರದ ವಿರುದ್ಧವೇ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಇಂತಹ ಭ್ರಷ್ಟ ಆಡಳಿತವನ್ನು ಹಿಂದೆ ಯಾರೂ ಕಂಡಿರಲಿಲ್ಲ. ಚುನಾವಣೆ ಸಮಯದಲ್ಲಿ ಯಾರೂ, ಯಾವುದೇ ದೂರು ನೀಡದಿದ್ದರೂ ಪ್ರಧಾನಿಗಳು ಬಂದು ನಮ್ಮ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಹೇಳಿದ್ದರು. ನಾವು ಆಗ ಅದರ ವಿರುದ್ಧ ಸವಾಲು ಹಾಕಿದೆವು. ಅವರ ಸರ್ಕಾರ ಬಂದ ನಂತರ 10 ಪರ್ಸೆಂಟ್ ಲಂಚ ಕೊಟ್ಟಿರುವವರಿಂದ ದೂರು ತೆಗೆದುಕೊಂಡು ವಿಚಾರಣೆ ನಡೆಸಿ ನಾವು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿಸಬಹುದಿತ್ತು.

- Advertisement -

ಶಿಕ್ಷೆ ನೀಡುವುದಿರಲಿ ತನಿಖೆ ನಡೆಸಲು ಹೋಗಲಿಲ್ಲ. ಪ್ರಧಾನಿಗಳು ಯಾವುದೇ ದಾಖಲೆ ಇಲ್ಲದೆ ರಾಜಕೀಯವಾಗಿ ಆ ಆರೋಪ ಮಾಡಿದ್ದರು. ಆದರೆ ಈಗ ರಾಜ್ಯದ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದು ರಾಜ್ಯ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಲಂಚದ ಹಾವಳಿ ಬಗ್ಗೆ ದೂರಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಅಷ್ಟೆಲ್ಲ ಲಂಚ ಕೊಟ್ಟು ನಮ್ಮಿಂದ ಗುಣಮಟ್ಟದ ಕಾಮಗಾರಿ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಡಿಕೆಶಿ ಟೀಕಿಸಿದರು.


ರಾಜ್ಯದ ಎಲ್ಲ ಗುತ್ತಿಗೆದಾರರು ಬೃಹತ್ ಮಟ್ಟದ ಪ್ರತಿಭಟನೆ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಇಡೀ ದೇಶದಲ್ಲಿ ಅತಿ ಹೆಚ್ಚು ಭ್ರಷ್ಟ ರಾಜ್ಯ ಸರ್ಕಾರ ಅಂತೇನಾದರೂ ಇದ್ದರೆ ಅದು ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ. ಬೆಡ್ ನಿಂದ, ಔಷಧಿ, ಹೆಣದ ಮೇಲೂ ಹಣ ವಸೂಲಿ. ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡು ಹಣ ಮಾಡಿದ್ದಾರೆ. ಕೋವಿಡ್ ನಿಂದ 4 ಲಕ್ಷ ಜನ ಸತ್ತಿದ್ದರೂ ಅವರಿಗೆ ಕೋವಿಡ್ ಮರಣ ಪ್ರಮಾಣ ಪತ್ರ ನೀಡಿಲ್ಲ. ಇದನ್ನು ನೀಡಲು ಕಮಿಷನ್ ಕೇಳುತ್ತಿದ್ದಾರೆ. ಸತ್ತವರ ಕುಟುಂಬದವರಿಂದ ಸರ್ಕಾರ ಸುಲಿಗೆ ಮಾಡಿ, ಹೆಣದ ಮೇಲೂ ಹಣ ಮಾಡುತ್ತಿದೆ.


ಕಾಂಗ್ರೆಸ್ ಪಕ್ಷ ಪ್ರತಿ ಪಂಚಾಯಿತಿಯಲ್ಲಿ 2-3 ಕೋಟಿಯಷ್ಟು ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ವೈಯಕ್ತಿಕವಾಗಿ ಜನ ತಮ್ಮ ಜಮೀನು, ಮನೆಗಳಲ್ಲಿ ಕೆಲಸ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗೆ ದೊಡ್ಡ ಶಕ್ತಿ ನೀಡಿದೆ. ಪಂಚಾಯಿತಿಗಳಿಗೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಸರ್ಕಾರದ ಹೊರತಾಗಿ ಬಿಜೆಪಿ ಸರ್ಕಾರ ಒಂದೇ ಒಂದು ಯೋಜನೆಯನ್ನಾದರೂ ಕೊಟ್ಟಿದೆಯೇ? ಅವರು ಕೊಟ್ಟಿದ್ದರೆ ಇಂದು ತಮ್ಮ ಅಭ್ಯರ್ಥಿಗೆ ಮತ ಕೇಳುವ ಹಕ್ಕು ಇರುತ್ತಿತ್ತು ಎಂದು ಹೇಳಿದರು.


ನಿಮ್ಮ ಕ್ಷೇತ್ರದಲ್ಲಿ ಲೋಕಸಭೆ ಸದಸ್ಯರು, ಕೇಂದ್ರದ ಮಂತ್ರಿಗಳು ಇದ್ದಾರೆ. ಇಲ್ಲಿರುವ ಕಾಫಿ, ಅಡಿಕೆ, ರಬ್ಬರ್, ಮೆಣಸು ಬೆಳೆ ಕೃಷಿ ಅಲ್ಲವೇ? ಅವರು ಜಮೀನಿಗೆ ಸಾಲ ಪಡೆದರೆ ಕೈಗಾರಿಕೆಗಳಿಗೆ ನೋಟೀಸ್ ಜಾರಿ ಮಾಡಿದಂತೆ ನೀಡುತ್ತೀರಿ. ಅವರನ್ನು ಹರಾಜು ಹಾಕಲು ಕಾಯ್ದೆ ಮಾಡಲು ಹೊರಟಿದ್ದಾರೆ. ಇದರ ವಿರುದ್ಧ ಶೋಭಕ್ಕ ಯಾಕೆ ಮಾತನಾಡುತ್ತಿಲ್ಲ. ಸಿ.ಟಿ. ರವಿ ಅವರು ಯಾಕೆ ಮಾತನಾಡುತ್ತಿಲ್ಲ? ಮಾಜಿ ಸಿಎಂ ಯಡಿಯೂರಪ್ಪ ಅವರು ಯಾಕೆ ಪ್ರತಿಭಟನೆ ಮಾಡುತ್ತಿಲ್ಲ. ರೈತರ ಜಮೀನುಗಳನ್ನು ತೆಗೆದುಕೊಳ್ಳಲು ನೀವೇ ಕಾಯ್ದೆಗಳ ಮೂಲಕ ಸಂಚು ರೂಪಿಸುತ್ತಿದ್ದೀರಿ. ಈ ಭಾಗದ ಜನ ಬುದ್ಧಿವಂತರು, ಪ್ರಜ್ಞಾವಂತರಿದ್ದಾರೆ.

ರಾಜ್ಯಕ್ಕೆ ಬದಲಾವಣೆ ಅನಿವಾರ್ಯ. ದೇಶ, ರಾಜ್ಯ ಉಳಿಸುವ ಅಗತ್ಯವಿದೆ. ಜತೆಗೆ ದಿನನಿತ್ಯದ ಬದುಕಿನಲ್ಲಿ ನಿಮ್ಮ ಜೇಬಿಗೆ ಬೆಲೆ ಏರಿಕೆ ಮೂಲಕ ಕತ್ತರಿ ಹಾಕಲಾಗುತ್ತಿದೆ. ನಿಮ್ಮ ಆದಾಯ ಹೆಚ್ಚಿಲ್ಲ, ವಸ್ತುಗಳ ಬೆಲೆ ಮಾತ್ರ ಹೆಚ್ಚುತ್ತಿದೆ. ಇದನ್ನು ತಡೆಯಲು ಸರ್ಕಾರ ಕಿತ್ತೊಗೆಯಬೇಕು. ಇದಕ್ಕೆ ನೀವೇ ನಮ್ಮ ರಾಯಭಾರಿಗಳಾಗಿ, ಧ್ವನಿಯಾಗಿ ಕೆಲಸ ಮಾಡಬೇಕು. ನೀವು ನಮಗೆ ಸಹಕಾರ ನೀಡಬೇಕು ಎಂದು ಶಿವಕುಮಾರ್ ಹೇಳಿದರು.



Join Whatsapp