ಗುವಾಹಟಿ: ಬಾಬರ್ ಯುಗದ ಮೊದಲು ಭಾರತದಲ್ಲಿದ್ದ ಎಲ್ಲರೂ ಹಿಂದೂಗಳಾಗಿದ್ದರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿಕೆ ನೀಡಿದ್ದಾರೆ.
“ಭಾರತ ಹಿಂದೂ ಬಹುಸಂಖ್ಯಾತ ದೇಶ. ಭಾರತದ ಹೊರಗಿರುವ ಯಾವುದೇ ಹಿಂದೂಗಳಿಗೆ ಸಮಸ್ಯೆಯಿದ್ದರೆ ದೇಶಕ್ಕೆ ಸ್ವಾಗತ. ಪ್ರತಿಯೊಬ್ಬ ಹಿಂದುವಿನ ಬೇರು ಭಾರತವಾಗಿದೆ. ಬಾಬರ್ ಯುಗದ ಮೊದಲು ಬಾರತದಲ್ಲಿ ಎಲ್ಲರೂ ಹಿಂದೂಗಳಾಗಿದ್ದರು” ಎಂದು ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಸಿಎಎ ಕುರಿತ ಪ್ರಶ್ನೆಗೆ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
“ಹಳೆಯ ದೇವಾಲಯಗಳನ್ನು ಪುನರ್ ನಿರ್ಮಿಸುವುದರಲ್ಲಿ ತಪ್ಪೇನಿದೆ, ನಾವು ಹಿಂದೂಗಳು, ನಾನೊಬ್ಬ ಹಿಂದುವಾಗಿ ಇತರ ಜಾತ್ಯತೀತವಾದಿಗಳಿಗಿಂತ ದೊಡ್ಡ ಜಾತ್ಯತೀತವಾದಿಯಾಗಿದ್ದೇನೆ”ಎಂದು ಶರ್ಮಾ ಪ್ರತಿಪಾದಿಸಿದ್ದಾರೆ.
ಬಿಜೆಪಿಗೆ ದೇವಾಲಯಗಳು ಚುನಾವಣಾ ವಿಷಯವಲ್ಲ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಈ ನಡುವೆ ಹೇಳಿದ್ದರು.
ಅಯೋಧ್ಯೆಯಲ್ಲಿ ವೈಭವದ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಮಥುರಾದ ಕೃಷ್ಣ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಕಾಯುತ್ತಿದೆ ಎಂದು ಅವರು ಹೇಳಿದ್ದರು. ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸುವುದಾಗಿ ಹಿಂದುತ್ವವಾದಿ ಸಂಘಟನೆಗಳ ಬೆದರಿಕೆಯ ನಡುವೆಯೇ ಮೌರ್ಯ ಈ ಹೇಳಿಕೆ ನೀಡಿದ್ದರು.