ನವದೆಹಲಿ: ಡಿಸೆಂಬರ್ 15ರಿಂದ ಆರಂಭವಾಗಬೇಕಿದ್ದ ನಿಯಮಿತ ವಾಣಿಜ್ಯ ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಮತ್ತೆ ಮುಂದೂಡಿರುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
20ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೋವಿಡ್-19ರ ಹೊಸ ತಳಿ ಒಮಿಕ್ರಾನ್ ಪತ್ತೆಯಾದ ಕಾರಣ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಮತ್ತೆ ಮುಂದೂಡಲಾಗಿದೆ. ವಿಮಾನಯಾನ ಪುನರಾರಂಭ ದಿನಾಂಕ ಘೋಷಣೆಯ ಬಗ್ಗೆ ಮುಂದಿನ ದಿನಗಳಲ್ಲಿ ತಿಳಸಲಾಗುವುದು ಎಂದು DGCA ಸರ್ಕ್ಯೂಲರ್’ನಲ್ಲಿ ತಿಳಿಸಿದೆ.
15 ದೇಶಗಳನ್ನು ಹೊರತು ಪಡಿಸಿ ಉಳಿದ ದೇಶಗಳಿಗೆ ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ನಿಯಮಿತ ವಾಣಿಜ್ಯ ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಡಿಸೆಂಬರ್ 15ರಿಂದ ಪುನರಾರಂಭಿಸುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ನ.26ರಂದು ತಿಳಿಸಿತ್ತು. . ನಿಗದಿತ ವಿಮಾನಯಾನ ಸೇವೆಗಳು ರದ್ದಾದ ಬಳಿಕ, ಕಳೆದ ವರ್ಷ ಜುಲೈನಿಂದ 28 ರಾಷ್ಟ್ರಗಳಿಗೆ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ವಿಶೇಷ ಪ್ರಯಾಣಿಕ ವಿಮಾನಗಳ ಹಾರಾಟ ನಡೆಸಲಾಗುತ್ತಿದೆ.