ಭಾರತವನ್ನು ಭಿಕ್ಷುಕ ರಾಷ್ಟ್ರವೆಂದ ಭೈರಪ್ಪ: ವ್ಯಾಪಕ ಆಕ್ರೋಶ

Prasthutha|

ಮೈಸೂರು : ಭಿಕ್ಷುಕ ರಾಷ್ಟ್ರವಾಗಿದ್ದ ಭಾರತವೀಗ ವಿಶ್ವದ ನೇತಾರ ರಾಷ್ಟ್ರವಾಗಿದೆ ಎಂಬ ಕಾದಂಬರಿಕಾರ ಡಾ.ಎಸ್.ಎಲ್ ಭೈರಪ್ಪ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -


ಮೈಸೂರಿನಲ್ಲಿ ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಮೈಸೂರು ಲಯನ್ಸ್ ಕ್ಲಬ್ ಆಫ್ ಸೌತ್ ಸಂಸ್ಥೆಯಿಂದ ಸೋಮವಾರ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭೈರಪ್ಪ ಈ ಹೇಳಿಕೆ ನೀಡಿದ್ದರು.


“ಎಡಪಂಥೀಯ ಸಿದ್ಧಾಂತಕ್ಕೆ ಒಡೆಯೋದು ಗೊತ್ತಿತ್ತೇ ಹೊರತು ಕಟ್ಟೋದು ಗೊತ್ತೇ ಇರಲಿಲ್ಲ. ಇದು ಆರಂಭವಾಗಿದ್ದು ನೆಹರೂ ಕಾಲದಿಂದ. ರಷ್ಯನ್ ಮಾದರಿಯನ್ನು ಭಾರತಕ್ಕೆ ತರಲು ಈ ದೇಶವನ್ನು ಭಿಕ್ಷುಕ ದೇಶವನ್ನಾಗಿ ಮಾಡಿಬಿಟ್ಟರು. ಇದು ಎಲ್ಲಿಗೆ ಹೋಗಿ ಮುಟ್ಟಿತ್ತೆಂದರೆ ನಮ್ಮ ದೇಶದ ಚಿನ್ನವನ್ನು ಅಡವಿಟ್ಟು, ಬ್ರಿಟನ್ ಬ್ಯಾಂಕಿನಿಂದ ಸಾಲ ಕೇಳಬೇಕಾಗಿ ಬಂತು. ನಿಮ್ಮ ಚಿನ್ನವನ್ನು ನಮ್ಮ ದೇಶದಲ್ಲಿ ಅಡವಿಟ್ಟರೆ ಮಾತ್ರ ಸಾಲಕೊಡುತ್ತೇವೆ ಎಂದು ಬ್ರಿಟನ್ ಬ್ಯಾಂಕ್ ಹೇಳಿತ್ತು. ಭಾರತದ ಮೇಲೆ ಇತರೆ ದೇಶಗಳಿಗೆ ನಂಬಿಕೆ ಇರಲಿಲ್ಲ” ಎಂದು ಭೈರಪ್ಪ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು.

- Advertisement -


“ನಮ್ಮ ಬಲಹೀನತೆ ವೈಚಾರಿಕತೆ ಮತ್ತು ಸಾಹಿತ್ಯಕ್ಕೂ ತಟ್ಟಿತು. ಕೀಳರಿಮೆಯನ್ನು ಬಿಂಬಿಸುವುದೇ ನಮ್ಮ ಶ್ರೇಷ್ಠತೆ ಆಯಿತು. ಇದನ್ನು ಮೆಟ್ಟಿ ನಿಲ್ಲಬೇಕಾದ ಕಾಲ ಇದೀಗ ಬಂದಿದೆ. ಇಂದು ಪರಿಸ್ಥಿತಿ ಬದಲಾಗಿವೆ. ವಿಶ್ವದ ಮುಂದೆ ಭಾರತ ಎದೆಯುಬ್ಬಿಸಿ ನಿಂತಿದೆ. ನಮ್ಮ ಆಹಾರ ಪದಾರ್ಥಗಳನ್ನು ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಭಾರತ ಇದೀಗ ಭಿಕ್ಷುಕ ರಾಷ್ಟ್ರವಲ್ಲ. ಇದು ಹೇಗೆ ಸಾಧ್ಯವಾಯಿತು? ಇದನ್ನು ಅರ್ಥಮಾಡಿಕೊಳ್ಳಲು ಇಷ್ಟು ವರ್ಷ ಬೇಕಾಯಿತು. ಇದಕ್ಕಾಗಿ ಸಮರ್ಥ ನಾಯಕತ್ವ ಬೇಕಾಯಿತು..” ಎಂದಿರುವ ಅವರು, ಎಂದಿನಂತೆ ನರೇಂದ್ರ ಮೋದಿಯವರ ನಾಯಕತ್ವವನ್ನು ಹೊಗಳಿದ್ದರು.


ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ತಮ್ಮ ಪಂಚೇಂದ್ರಿಯಗಳನ್ನು ಕಳೆದುಕೊಂಡು ಮಾತನಾಡುತ್ತಿರುವ ಭೈರಪ್ಪನವರು ಭಾರತವನ್ನು ಭಿಕ್ಷುಕ ರಾಷ್ಟ್ರ ಎಂದು ಕರೆದಿರುವುದು ಬೇಸರದ ಸಂಗತಿ. ಸಾಹಿತ್ಯದ ಆಶಯಗಳಿಗೆ ತದ್ವಿರುದ್ಧವಾಗಿ ಮಾತನಾಡುತ್ತಿರುವ ಭೈರಪ್ಪನವರ ಮಾತುಗಳ ಬಗ್ಗೆ ನನಗಂತೂ ಯಾವುದೇ ಅಚ್ಚರಿಯಿಲ್ಲ. ಕಾರಣ ಅವರು ಬೆಳೆದು ಬಂದಿರುವ ಸಾಮಾಜಿಕ ಹಿನ್ನೆಲೆಯ ಮಹಿಮೆ ಹಾಗಿದೆ. ತಾನು ಬದುಕಿದ್ದ ದೇಶದ ಇತಿಹಾಸವನ್ನೇ ಅರಿಯದ ಸಾಹಿತಿಯೊಬ್ಬರು ನೇರವಾಗಿ ತನ್ನ ದೇಶವನ್ನು ಭಿಕ್ಷುಕ ರಾಷ್ಟ್ರ ಎಂದು ಕರೆಯಬೇಕಾದರೆ ಆತ ಯಾವುದೋ ಗಂಭೀರ ಮಾನಸಿಕ ಖಾಯಿಲೆಯಿಂದ ಬಳಲುತ್ತಿರಬಹುದು ಎಂದೇ ನನಗೆ ಅನಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.


“ದೇಶದ ಹಿಂದಿನ ಸಾಲದ ಪ್ರಮಾಣಕ್ಕೆ ಹೋಲಿಸಿದರೆ ಈಗ ಅದರ ಪ್ರಮಾಣ ಹೆಚ್ಚಾಗಿದೆ. ಈ ಸಂಗತಿಯನ್ನು ಅರಿಯದ ಭೈರಪ್ಪನವರು ಅನಗತ್ಯವಾಗಿ ನೆಹರೂ ಹೆಸರನ್ನು ಎಳೆದು ತಂದಿರುವುದರ ಹಿಂದೆ ಮನುವಾದಿ ಸರ್ಕಾರವನ್ನು ಬೆಂಬಲಿಸುವ ಅವರ ಬೌದ್ಧಿಕ ಕುತಂತ್ರ ಅಡಗಿದೆಯೇ ವಿನಃ ಸಾಮಾಜಿಕ ನ್ಯಾಯ ಸಾಧನೆಗೆ ಪೂರಕವಾದ ಯಾವ ಅಂಶವೂ ಇಲ್ಲಿ ಇಲ್ಲ” ಎಂದಿದ್ದಾರೆ.
“ದೇಶದ ಅಯೋಮಯ ಸ್ಥಿತಿಯ ಬಗ್ಗೆ ಮತ್ತು ಜನ ಸಾಮಾನ್ಯರ ಸಂಕಷ್ಟದ ಬದುಕಿನ ಬಗ್ಗೆ ಸತ್ಯ ಗೊತ್ತಿದ್ದರೂ ಸುಳ್ಳನ್ನೇ ಆಯ್ಕೆ ಮಾಡಿಕೊಳ್ಳುವ ಭೈರಪ್ಪನವರ ಮಾತನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳಬಾರದು” ಎಂದು ಮನವಿ ಮಾಡಿದ್ದಾರೆ.


ಇನ್ನು ಪ್ರಾಧ್ಯಾಪಕ ಡಾ.ಜೆ.ಎಸ್. ಪಾಟೀಲ್ ಪ್ರತಿಕ್ರಿಯಿಸಿ, ಆಪರೇಷನ್ ಕಮಲಕ್ಕೊಳಗಾಗಿ ಬಲಪಂಥೀಯ ವಿಷ ಬಿತ್ತುವ ಸಾಹಿತ್ಯ ಕೃಷಿಯನ್ನು ಮರೆತು ಅನಾಯಾಸ ಲಕ್ಷ ರೂಪಾಯಿ ಸಂಬಳ ಪಡೆಯುವ ನ್ಯಾಷನಲ್ ಪ್ರೊಫೆಸರ್ ಗಿರಿಯಿಂದ ಪುಳಕಿತನಾಗಿ ದೇಶದ್ರೋಹಿಯಂತೆ ಊಳಿಡುತ್ತಿರುವ ವರಿಷ್ಠ ಮೋದಿ ಭಕ್ತ ಭೈರ!! ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಗುಂಡ್ಕಲ್ ತಮ್ಮಣ್ಣಗೌಡ ಎಂಬವರು ಟ್ವೀಟ್ ಮಾಡಿ, ಇವ ಸಾಹಿತಿನೋ ಅಥವಾ ಒಂದು ಪಕ್ಷಕ್ಕೆ ಮಾರಾಟ ಆದ ದಲ್ಲಾಳಿನೋ ಒಂದು ಅರ್ಥ ಅಗ್ತಾ ಇಲ್ಲ!! ಒಂದು ಪಕ್ಷವನ್ನು ಸಂತೃಪ್ತಗೊಳಿಸಲು ಭಾರತವನ್ನೇ ಭಿಕ್ಷುಕ ರಾಷ್ಟ್ರ ಅನ್ನೋ ಅವಿದ್ಯಾವಂತ ಜಾತಿವ್ಯಾಧಿ ಸಾಹಿತಿ ಈತ!‌‌…ಎಂದು ಹರಿಹಾಯ್ದಿದ್ದಾರೆ.



Join Whatsapp