ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ಆರೋಪ: ಡಾ. ರತ್ನಾಕರ್’ಗೆ ಜಾಮೀನು !

Prasthutha|

ಮಂಗಳೂರು: ಕರ್ತವ್ಯದ ಸಮಯದಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮ ಅಧಿಕಾರಿ ಡಾ| ರತ್ನಾಕರ್‌’ಗೆ 3ನೇ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ.

- Advertisement -

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯ ಅಧೀನದಲ್ಲಿ ಬರುವ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ರತ್ನಾಕರ್’ರನ್ನು ಕೆಲಸದಿಂದ ಅಮಾನತು ಮಾಡಲಾಗಿದ್ದು, ಇಲಾಖಾ ವಿಚಾರಣೆ ನಡೆಯುತ್ತಿದೆ.

ಮಹಿಳಾ ಸಿಬಂದಿಗಳ ಜತೆ ಕಚೇರಿ ವೇಳೆ ಅಸಭ್ಯವಾಗಿ ವರ್ತಿಸುವ ಫೋಟೊ ಹಾಗೂ ವೀಡಿಯೋ ತುಣುಕು ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸುಮಾರು 2-3 ತಿಂಗಳ ಹಿಂದೆ ಈ ಘಟನೆ ಸಂಭವಿಸಿದ್ದು,ತಡವಾಗಿ ಬೆಳಕಿಗೆ ಬಂದಿತ್ತು. ರತ್ನಾಕರ್‌ ಮಹಿಳಾ ಸಿಬಂದಿ ಜತೆ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯಾವಳಿಗಳು ಮಾಧ್ಯಮದಲ್ಲಿ ಪ್ರಸಾರವಾದ ಬೆನ್ನಲ್ಲೇ ಕಚೇರಿ ಸಿಬ್ಬಂದಿಯೊಬ್ಬರು ನಗರ ಪೊಲೀಸ್‌ ಆಯುಕ್ತರು ಹಾಗೂ ಮಹಿಳಾ ಠಾಣೆಗೆ ದೂರು ನೀಡಿದ್ದರು.

- Advertisement -

ಸಿಬ್ಬಂದಿ ದೂರಿನ ಮೇಲೆ ಆರೋಪಿ ರತ್ನಾಕರ್‌ನನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯವು ಆರೋಪಿ ವೈದ್ಯನನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು. ಕಸ್ಟಡಿ ಅವಧಿ ಸೋಮವಾರಕ್ಕೆ ಮುಕ್ತಾಯವಾದ ಕಾರಣ ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ ವೇಳೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಕಚೇರಿ ವೇಳೆಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ್ಬಂದಿ ಜೊತೆಗೆ ಚೆಲ್ಲಾಟ ಆಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಚೇರಿಯಲ್ಲಿ 9 ಮಹಿಳಾ ಸಿಬ್ಬಂದಿಗಳಿದ್ದು ಅವರೊಂದಿಗೆ ನಿತ್ಯ ಅಸಭ್ಯವಾಗಿ ವರ್ತಿಸುತ್ತಿದ್ದ,  ಡಾ.ರತ್ನಾಕರ್ ವೈದ್ಯಾಧಿಕಾರಿ ಮಾತ್ರವಲ್ಲದೆ ಆಯುಷ್ಮಾನ್ ನೋಡೆಲ್ ಆಫೀಸರ್ ಕೂಡ ಆಗಿದ್ದಾರೆ.

ಮಹಿಳಾ ಸಿಬ್ಬಂದಿಯನ್ನು ಕರೆದುಕೊಂಡು ಟ್ರಿಪ್ ಹೋಗುತ್ತಿದ್ದ ಡಾ.ರತ್ನಾಕರ್, ತನ್ನ ಚೆಲ್ಲಾಟಕ್ಕೆ ಸಹಕರಿಸದ ಸಿಬ್ಬಂದಿಗೆ ಟಾರ್ಚರ್ ನೀಡುತ್ತಿದ್ದ ಎನ್ನಲಾಗಿದೆ.



Join Whatsapp