ಕೋಲ್ಕತ್ತ: ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಕೊಂಡೊಯ್ಯುತ್ತಿದ್ದ ಮೆಟಡೋರ್ ವಾಹನವೊಂದು ರಸ್ತೆ ಬದಿ ನಿಲ್ಲಿಸಿದ್ದ ಲಾರಿಯೊಂದಕ್ಕೆ ಡಿಕ್ಕಿಯಾದ ಪರಿಣಾಮ 18 ಮಂದಿ ಸಾವನ್ನಪ್ಪಿದ್ದು, 5 ಮಂದಿ ಗಂಭೀರ ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಹಂಸಖಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. 11 ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಏಳು ಮಂದಿ ಶಕ್ತಿನಗರದ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟವರಲ್ಲಿ 10 ಪುರುಷರು, ಏಳು ಮಹಿಳೆಯರು ಹಾಗೂ ಆರು ವರ್ಷದ ಬಾಲಕಿ ಸೇರಿದ್ದಾರೆ.
ಬಾಗ್ಡಾದ ಬಳಿಯ ಪರ್ಮಧಾನ್ ನಿವಾಸಿಯಾಗಿದ್ದ ಶ್ರಬಣಿ ಮುಹುರಿ ಎಂಬ ವೃದ್ಧೆಯ ಅಂತ್ಯಕ್ರಿಯೆಗಾಗಿ ನವದ್ವೀಪದ ಸ್ಮಶಾನದ ಕಡೆಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ಟ್ರಕ್ಗೆ ಮೆಟಡೋರ್ ವಾಹನ ಡಿಕ್ಕಿ ಹೊಡೆದಿದೆ. ವಿಪರೀತ ಇಬ್ಬನಿ ಬೀಳುತ್ತಿದ್ದ ಕಾರಣ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಸದಿರುವುದು ಮತ್ತು ಅತಿಯಾದ ವೇಗದ ಚಾಲನೆಯಿಂದಾಗಿ ಅಪಘಾತ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪುಲ್ಖರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷರು. ಪರಿಹಾರ ಘೋಷಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಾಜ್ಯಪಾಲ ಜಗದೀಪ್ ಧಾನ್ಕರ್ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.