ಮೆಲ್ಬೋರ್ನ್: ಆಸ್ಟ್ರೇಲಿಯಾ ಟೆಸ್ಟ್ ತಂಡದ ಹೊಸ ನಾಯಕನಾಗಿ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್’ರನ್ನು ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆಮಾಡಿದೆ. ಮಾಜಿ ನಾಯಕ ಸ್ಟೀವನ್ ಸ್ಮಿತ್’ಗೆ ಉಪನಾಯಕನ ಸ್ಥಾನ ನೀಡಲಾಗಿದೆ. ಡಿ. 8ರಿಂದ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ಆಶಸ್ ಸರಣಿ ಕಮ್ಮಿನ್ಸ್ ನಾಯಕತ್ವಕ್ಕೆ ಮೊದಲ ಸವಾಲು ಆಗಿರಲಿದೆ.
4 ವರ್ಷಗಳ ಹಿಂದೆ ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ವಿವಾದದಿಂದಾಗಿ ಆಸೀಸ್ ಟೆಸ್ಟ್ ತಂಡದ ನಾಯಕತ್ವ ಸ್ಥಾನಕ್ಕೆ ವಿಕೆಟ್ ಕೀಪರ್-ಬ್ಯಾಟರ್ ಟಿಮ್ ಪೇನ್ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಮುಂಬರುವ ಆಶಸ್ ಸರಣಿಯಿಂದಲೂ ಪೇನ್ ವಿಶ್ರಾಂತಿ ಬಯಸಿದ್ದಾರೆ. ಅಲೆಕ್ಸ್ ಕ್ಯಾರಿ ಅಥವಾ ಜೋಶ್ ಇನ್‌ಗ್ಲಿಸ್ ಆಶಸ್ ಸರಣಿಗೆ ಕೀಪರ್ ಆಗಿ ಅವಕಾಶ ಪಡೆಯುವ ನಿರೀಕ್ಷೆ ಇದೆ.
28 ವರ್ಷದ ಕಮ್ಮಿನ್ಸ್ ಆಸೀಸ್ ಟೆಸ್ಟ್ ತಂಡದ 47ನೇ ನಾಯಕ ಮತ್ತು ಕಳೆದ 65 ವರ್ಷಗಳಲ್ಲಿ ಟೆಸ್ಟ್ ನಾಯಕತ್ವ ವಹಿಸಿದ ಮೊದಲ ಆಸೀಸ್ ವೇಗಿ ಎನಿಸಿದ್ದಾರೆ. 2011ರಲ್ಲಿ ಪದಾರ್ಪಣೆ ಮಾಡಿದ್ದ ಕಮ್ಮಿನ್ಸ್ ಇದುವರೆಗೆ 34 ಟೆಸ್ಟ್ ಆಡಿದ್ದು, 164 ವಿಕೆಟ್ ಕಬಳಿಸಿದ್ದಾರೆ.
2018ರ ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿ ಸ್ಟೀವನ್ ಸ್ಮಿತ್ ನಾಯಕತ್ವ ಕಳೆದುಕೊಂಡಿದ್ದರು.ಇದೀಗ ಉಪನಾಯಕರಾಗಿ ಕಮ್ಮಿನ್ಸ್‌ಗೆ ನೆರವಾಗಲಿರುವ ಸ್ಮಿತ್ ಭವಿಷ್ಯದಲ್ಲಿ ಮತ್ತೆ ಆಸೀಸ್ ನಾಯಕತ್ವ ವಹಿಸುವ ಸಾಧ್ಯತೆಯಿದೆ.