ಬೆಂಗಳೂರು : ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಹಣಕಾಸು ಅವ್ಯವಹಾರದ ಬಹುಕೋಟಿ ಐಎಂಎ ಹಗರಣದ ಆರೋಪಿ ಮೊಹಮ್ಮದ್ ಮನ್ಸೂರ್ ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಆದರೆ, ವಿಷಯಕ್ಕೆ ಸಂಬಂಧಿಸಿದ ಸಿಬಿಐ ತನಿಖೆ ಅಧೀನದಲ್ಲಿರುವ ಮುಖ್ಯ ಪ್ರಕರಣದಲ್ಲಿ ಜಾಮೀನು ಲಭಿಸದ ಹಿನ್ನೆಲೆಯಲ್ಲಿ, ಆತ ಜೈಲಿನಲ್ಲೇ ಉಳಿಯಲಿದ್ದಾನೆ.
ವಿಚಾರಣಾಧೀನ ನ್ಯಾಯಾಲಯವು ತನ್ನ ಜಾಮೀನು ಅರ್ಜಿ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಮನ್ಸೂರ್ ಹೈಕೋರ್ಟ್ ಮೆಟ್ಟಿಲೇರಿದ್ದ. ತಾನು ಭಾರತಕ್ಕೆ ಸ್ವಯಂ ಪ್ರೇರಿತವಾಗಿ ಭಾರತಕ್ಕೆ ಬಂದು ಪೊಲೀಸರಿಗೆ ಶರಣಾಗಿದ್ದೆ ಮತ್ತು ತನಿಖೆಗೆ ಸಹಕರಿಸಿದ್ದೆ ಮತ್ತು ಅದು ಈಗ ಪೂರ್ಣಗೊಂಡಿದೆ. ತಾನು ತನ್ನ ಪಾಸ್ ಪೋರ್ಟ್ ಕೂಡ ಒಪ್ಪಿಸಿದ್ದೇನೆ ಎಂದು ಮನ್ಸೂರ್ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾನೆ.
ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಜಾಮೀನು ಅರ್ಜಿ ಕುರಿತ ವಿಚಾರಣೆ ನಡೆಸಿ, ಜಾಮೀನು ಪಡೆಯಲು 5 ಲಕ್ಷ ರೂ. ಬಾಂಡ್ ಭದ್ರತೆ ನೀಡುವಂತೆ ನಿರ್ದೇಶಿಸಿದ್ದಾರೆ.
ಮನ್ಸೂರ್ ವಿಚಾರಣೆಯ ಸಂದರ್ಭ ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗುವಂತೆ ಮತ್ತು ಪ್ರತಿ 15 ದಿನಗಳಿಗೊಮ್ಮೆ ಬೆಂಗಳೂರಿನ ಜಾರಿ ನಿರ್ದೇಶನಾಲಯ ಕಚೇರಿಗೆ ಬಂದು ಹಾಜರಿ ಹಾಕುವಂತೆ ಕೋರ್ಟ್ ನಿರ್ದೇಶಿಸಿದೆ.