►ಮಮತಾ ಭೇಟಿ ಬೆನ್ನಲ್ಲೇ ಮೋದಿ ವಿರುದ್ಧ ಟೀಕಾಸ್ತ್ರ
ನವದೆಹಲಿ: ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಗುರುವಾರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಆಡಳಿತದ ಪ್ರತಿಯೊಂದು ಹಂತದಲ್ಲೂ ಮೋದಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದ ಬೆನ್ನಲ್ಲೇ ಸುಬ್ರಮಣಿಯನ್ ಸ್ವಾಮಿ ಈ ಹೇಳಿಕೆ ನೀಡಿದ್ದಾರೆ.
ಆರ್ಥಿಕತೆ ಮತ್ತು ಗಡಿ ಭದ್ರತೆ ಕ್ಷೇತ್ರಗಳಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಫ್ಘಾನಿಸ್ತಾನ ಬಿಕ್ಕಟ್ಟನ್ನು ಕೇಂದ್ರ ನಿಭಾಯಿಸಿದ ರೀತಿ ಕೂಡ ‘ವೈಫಲ್ಯ’ ದಿಂದ ಕೂಡಿದೆ ಎಂದು ಆರೋಪಿಸಿದ ಸುಬ್ರಮಣಿಯನ್ ಸ್ವಾಮಿ, ಪೆಗಾಸಸ್ ಕಣ್ಗಾವಲು ಇರಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬುಧವಾರ ಸುಬ್ರಮಣಿಯನ್ ಸ್ವಾಮಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಶ್ಲಾಘಿಸಿದ್ದರು
ಮಮತಾ ಅವರನ್ನು ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಚಂದ್ರಶೇಖರ್ ಮತ್ತು ಪಿ.ವಿ. ನರಸಿಂಹ ರಾವ್ ಅವರಂತಹ ರಾಜಕೀಯ ಮುತ್ಸದ್ಧಿಗಳೊಂದಿಗೆ ಹೋಲಿಸಿದ್ದರು.
ಸುಬ್ರಮಣಿಯನ್ ಸ್ವಾಮಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. “ಚೀನಾ ನಮ್ಮ ಪರಮಾಣು ಶಸ್ತ್ರಾಸ್ತ್ರಕ್ಕೆ ಹೆದರದಿದ್ದರೆ ನಾವು ಅವರ ಅಣ್ವಸ್ತ್ರಕ್ಕೆ ಏಕೆ ಹೆದರಬೇಕು?” ಎಂದು ಅವರು ನವೆಂಬರ್ 23 ರಂದು ಟ್ವೀಟ್ ಮಾಡಿದ್ದರು.
ಇದಕ್ಕೂ ಮೊದಲು ಬೆಲೆ ಏರಿಕೆಯ ಬಗ್ಗೆ ಟ್ವಿಟರ್ ಬಳಕೆದಾರರ ಪ್ರತಿಕ್ರಿಯೆಗೆ ಉತ್ತರಿಸಿದ ಸ್ವಾಮಿ, “ಅವರಿಗೆ (ಪ್ರಧಾನಿ ನರೇಂದ್ರ ಮೋದಿ) ಅರ್ಥಶಾಸ್ತ್ರ ತಿಳಿದಿಲ್ಲ ಎಂದು ಕುಟುಕಿದ್ದರು.