ಬೆಂಗಳೂರು: ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಮ್ ಎಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈಗ ಬಿಜೆಪಿಯ ಬಿ ಟೀಮ್ ಹಾಗೂ ಸಿ ಟೀಮ್ ಯಾವ ಪಕ್ಷ ಎನ್ನುವುದು ಜನರಿಗೆ ಈಗ ಚೆನ್ನಾಗಿ ಅರ್ಥವಾಗಿದೆ ಎಂದರು.
ದೇವನಹಳ್ಳಿಯಲ್ಲಿ ಇಂದು ವಿಧಾನ ಪರಿಷತ್ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ರಮೇಶ್ ಗೌಡ ಅವರು ನಾಮಪತ್ರ ಸಲ್ಲಿಸಿದ ವೇಳೆ ಮಾಜಿ ಮುಖ್ಯಮಂತ್ರಿಗಳು ಮಾಧ್ಯಮಗಳ ಜತೆ ಮಾತನಾಡಿದರು.
ನಿಜವಾದ ಎ ಟೀಮ್, ಬಿ ಟೀಮ್ ಮತ್ತು ಸಿ ಟೀಮ್ ಯಾವುದು ಎನ್ನುವುದು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಗೊತ್ತಾಗುತ್ತದೆ. ಹಾಸನದಲ್ಲಿ ತಂದೆ (ಎ.ಮಂಜು) ಬಿಜೆಪಿ ಅಭ್ಯರ್ಥಿ. ಕೊಡಗಿನಲ್ಲಿ ಅವರ ಪುತ್ರನೇ ಕಾಂಗ್ರೆಸ್ ಪಕ್ಷದ ಉಮೇದುವಾರ. ಬಿಜೆಪಿ ಸರಕಾರದಲ್ಲಿ ಸಚಿವರಿಗೆ ಪಿಎ ಆಗಿದ್ದ ವ್ಯಕ್ತಿ ಈಗ ಮಂಡ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ. ಇದು ಏನನ್ನು ಸೂಚಿಸುತ್ತದೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಮುಖಂಡನನ್ನು ಬಿಜೆಪಿಗೆ ಕಳಿಸಿ ಅಭ್ಯರ್ಥಿ ಮಾಡಿತ್ತು. ಈಗ ಅದೇ ಬಿಜೆಪಿಯು ತನ್ನ ನಾಯಕನ ಮಗನನ್ನು ಕಾಂಗ್ರೆಸ್ ಪಕ್ಷಕ್ಕೆ ಕಳಿಸಿ ಕೊಡಗಿನ ಅಭ್ಯರ್ಥಿ ಮಾಡಿದೆ. ಇದು ರಾಷ್ಟ್ರೀಯ ಪಕ್ಷಗಳ ಅಡ್ಜೆಸ್ ಮೆಂಟ್ ರಾಜಕೀಯ ಎಂದು ಅವರು ಟೀಕಿಸಿದರು.
ಈಗ ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣ ಕಳಚಿ ಬಿದ್ದಿದೆ. ಜನರಿಗೂ ಆ ಪಕ್ಷದ ಅಸಲಿ ಸ್ವರೂಪ ಗೊತ್ತಾಗಿದೆ. ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಈಗ ಏನು ಹೇಳುತ್ತಾರೆ? ಯಾವ ನಾಲಗೆಯಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಾರೆ ಎಂದು ಅವರು ಕೇಳಿದರು.