ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ದಕ್ಷಿಣ ಕನ್ನಡ, ಉಡುಪಿ ದ್ವಿ ಸದಸ್ಯ ಕ್ಷೇತ್ರದಿಂದ ಎಸ್ ಡಿಪಿಐ ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
SDPI ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹಮ್ಮದ್, ಉಪಾಧ್ಯಕ್ಷ ಶಾಹಿದ್ ಅಲಿ, ದ.ಕ. ಜಿಲ್ಲಾ ಉಪಾಧ್ಯಕ್ಷರುಗಳಾದ ವಿಕ್ಟರ್ ಮಾರ್ಟಿಸ್, ಮಿಸ್ರಿಯಾ ಕಣ್ಣೂರು, ದ.ಕ.ಜಿಲ್ಲಾ ಕಾರ್ಯದರ್ಶಿಗಳಾದ ಅಕ್ಬರ್ ಬೆಳ್ತಂಗಡಿ, ಶಾಕೀರ್ ಅಳಕೆ ಮಜಲು ,ಜಿಲ್ಲಾ ಸಮಿತಿ ಸದಸ್ಯರಾದ ,ಝಾಕೀರ್ ಉಳ್ಳಾಲ್, ಜಮಾಲ್ ಜೋಕಟ್ಟೆ, ಯೂಸುಫ್ ಆಲಡ್ಕ, ಮೂಡಬಿದ್ರೆ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಆಸಿಫ್ ಕೋಟೆಬಾಗಿಲು, ಶರೀಫ್ ಪಾಂಡೇಶ್ವರ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಫಿ ಬೆಳ್ಳಾರೆ, ಕೋವಿಡ್ ನೆಪದಲ್ಲಿ ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಗಳಿಗೆ ಅನುದಾನ ಕಡಿತಗೊಳಿಸಿದೆ. ಇದರಿಂದ ಸ್ಥಳೀಯ ಪ್ರತಿನಿಧಿಗಳಿಗೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ಹೆಚ್ಚಿನ ಗ್ರಾಮ ಪಂಚಾಯತ್ ಸದಸ್ಯರು ಈ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ, ಅವರ ಈ ಸಮಸ್ಯೆಗೆ ಸ್ಪಂದಿಸುವ ಉದ್ದೇಶದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಎಲ್ಲಾ ಕಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಹೊಂದಾಣಿಕೆಯಿಂದ ಸ್ಪರ್ಧಿಸುತ್ತಿದೆ. ‘ಒಂದು ನಮಗೆ ಮತ್ತೊಂದು ನಿಮಗೆ’ ಎಂಬ ತತ್ವದಡಿ ಅವಿರೋಧ ಆಯ್ಕೆಗೆ ಮುಂದಾಗಿದೆ. ಜನಪ್ರತಿನಿಧಿಗಳ ಸಮಸ್ಯೆಯನ್ನು ಜನರ ಮುಂದೆ ತೆಗೆದುಕೊಂಡು ಹೋಗಲಾಗುವುದು. ಪ್ರತಿ ಗ್ರಾಮ ಪಂಚಾಯತ್ ಕ್ಷೇತ್ರಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯತ್ ಸದಸ್ಯರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದರು.