ವಾಷಿಂಗ್ಟನ್: ಅಮೆರಿಕದ ವಿಸ್ಕಾನ್ಸಿನ್ ಎಂಬಲ್ಲಿ ಭಾನುವಾರ ಕ್ರಿಸ್ಮಸ್ ಜಾಥಾವೊಂದರ ಮೇಲೆ ವಾಹನವೊಂದು ನುಗ್ಗಿದ ಪರಿಣಾಮ ಹಲವು ಮಂದಿ ಸಾವನ್ನಪ್ಪಿದ್ದು, 20 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಿಲ್ವಾಕೀ ನಗರದ ವೌಕೇಶಾ ಎಂಬಲ್ಲಿ ವಾರ್ಷಿಕ ಕ್ರಿಸ್ಮಸ್ ಜಾಥಾವನ್ನು ವೀಕ್ಷಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ವೌಕೇಶಾ ಕ್ರಿಸ್ಮಸ್ ಜಾಥಾ ನಡೆಯುತ್ತಿದ್ದಾಗ ಕೆಂಪು ಬಣ್ಣದ SUV ಕಾರು ಬ್ಯಾರಿಕೇಡ್ ಭೇದಿಸಿ ಮುಖ್ಯ ರಸ್ತೆಯ ಪಶ್ಚಿಮದ ಕಡೆಗೆ ಹರಿದಿದೆ ಎಂದು ಪೊಲೀಸ್ ಮುಖ್ಯಸ್ಥ ಡಾನ್ ಥಾಂಪ್ಸನ್ ಸುದ್ದಿಗಾರರಿಗೆ ತಿಳಿಸಿದರು.ವಾಹನವು 20 ಕ್ಕೂ ಅಧಿಕ ಮಂದಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಕ್ಕಳು ಸೇರಿದಂತೆ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ಉಲ್ಲೇಖಿಸಿದರು
ಸತ್ತವರ ನಿರ್ದಿಷ್ಟ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಕುಟುಂಬಗಳಿಗೆ ಮಾಹಿತಿಯನ್ನು ನೀಡುವವರೆಗೂ ಸತ್ತವರ ಪಟ್ಟಿ ಬಿಡುಗಡೆ ಮಾಡುವುದಿಲ್ಲ ಎಂದು ಅವರು ತಿಳಿಸಿದರು.
ಈ ಘಟನೆಯಲ್ಲಿ 11 ಮಂದಿ ವಯಸ್ಕರು ಮತ್ತು 12 ಮಕ್ಕಳನ್ನು ಆರು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಅಗ್ನಿಶಾಮಕ ಘಟಕದ ಮುಖ್ಯಸ್ಥ ಸ್ಟೀವನ್ ಹೊವಾರ್ಡ್ ಸುದ್ದಿಗಾರರಿಗೆ ತಿಳಿಸಿದರು.
ಕ್ರಿಸ್ಮಸ್ ಜಾಥಾಕ್ಕೆ ಹರಿಯ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, SUV ಅನ್ನು ತಡೆಯುವ ಪ್ರಯತ್ನದಲ್ಲಿ ಗುಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವಿಷಾದ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.