ಕೋಲ್ಕತ್ತ: ನ್ಯೂಜಿಲೆಂಡ್ ವಿರುದ್ಧದ T-20 ಸರಣಿಯ ಮೂರನೇ ಪಂದ್ಯದಲ್ಲಿ 73 ರನ್ಗಳ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಆ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಕಿವೀಸ್ ವಿರುದ್ಧದ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (56) ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟದಲ್ಲಿ 184 ರನ್ ಕಲೆಹಾಕಿತ್ತು. ಆದರೆ ಭಾರತ ನೀಡಿದ್ದ ಗುರಿಯನ್ನು ತಲುಪಲು ಯಾವ ಹಂತದಲ್ಲೂ ಪ್ರಯತ್ನಿಸದ ಕಿವೀಸ್ 17. 2 ಓವರ್’ಗಳಲ್ಲಿ ಸರ್ವಪತನ ಕಂಡಿತು.
3 ಓವರ್ನಲ್ಲಿ 9 ರನ್ ನೀಡಿ 3 ವಿಕೆಟ್ ಪಡೆದ ಅಕ್ಷರ್ ಪಟೇಲ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಹಾಗೂ 3 ಪಂದ್ಯಗಳಲ್ಲಿ 159 ರನ್’ಗಳಿಸಿದ ಕ್ಯಾಪ್ಟನ್ ರೋಹಿತ್ ಶರ್ಮಾ ಸರಣಿಶ್ರೇಷ್ಟ ಪ್ರಶಸ್ತಿ ಪಡೆದರು.
ಟೀಮ್ ಇಂಡಿಯಾ ಇನ್ನಿಂಗ್ಸ್’ನಲ್ಲಿ ರೋಹಿತ್ ಶರ್ಮಾ 31 ಎಸೆತಗಳ ಎದುರು 3 ಸಿಕ್ಸರ್, 5 ಬೌಂಡರಿಗಳ ನೆರವಿನಿಂದ 56 ರನ್’ಗಳಿಸಿ ನಿರ್ಗಮಿಸಿದರು. ಉಳಿದಂತೆ ಇಶಾನ್ ಕಿಶನ್ 29, ಶ್ರೇಯಸ್ ಅಯ್ಯರ್ 25, ವೆಂಕಟೇಶ್ ಅಯ್ಯರ್ 20 ರನ್’ಗಳಿಸಿದರು. ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್ 3 ವಿಕೆಟ್ ಹಾಗೂ ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್ ಮತ್ತು ಇಶ್ ಸೋಧಿ ತಲಾ 1 ವಿಕೆಟ್ ಪಡೆದರು.
ಭಾರತದ 185 ರನ್ಗಳ ಗುರಿಯನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್ ಪರ ಓಪನರ್ ಮಾರ್ಟಿನ್ ಗಪ್ಟಿಲ್ 36 ಎಸೆತಗಳಲ್ಲಿ 51 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ತಂಡದ ಉಳಿದ ಯಾವುದೇ ಆಟಗಾರನೂ ಗಪ್ಟಿಲ್’ಗೆ ಸಾಥ್ ನೀಡಲಿಲ್ಲ. ಡೇರಿಲ್ ಮಿಚೆಲ್ 5, ಮಾರ್ಕ್ ಚಾಂಪ್’ಮನ್ 0, ಗ್ಲೆನ್ ಫಿಲಿಪ್ಸ್ 0, ಟಿಮ್ ಸೈಫರ್ಟ್ 17, ಜೇಮ್ಸ್ ನೀಶಮ್ 3, ಮಿಚೆಲ್ ಸ್ಯಾಂಟ್ನರ್ 2, ಆ್ಯಡಂ ಮಿಲ್ನೆ 7, ಇಶ್ ಸೋಧಿ 9, ಲಾಕಿ ಫರ್ಗ್ಯೂಸನ್ 14 ರನ್ ಗಳಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 17.2 ಓವರ್ಗಳಲ್ಲಿ 111 ರನ್ಗಳಿಗೆ ಆಟ ಮುಗಿಸಿತು.
T-20 ಸರಣಿಯಲ್ಲಿ ಜೈಪುರ ಮತ್ತು ರಾಂಚಿಯಲ್ಲಿ ನಡೆದ ಮೊದಲ ಎರಡು ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು. ಹೀಗಾಗಿ ಭಾನುವಾರದ ಟೀಮ್ ಇಂಡಿಯಾ ಪಾಲಿಗೆ ಔಪಚಾರಿಕ ಪಂದ್ಯವಾಗಿತ್ತು.