ಮಂಗಳೂರು: ಇಟ್ಟಿಗೆ ಕಾರ್ಖಾನೆಯ ಡ್ರೈನೇಜ್’ನಲ್ಲಿ ಬಾಲಕಿಯ ಮೃತದೇಹ ಪತ್ತೆ, ಅತ್ಯಾಚಾರ ಶಂಕೆ

Prasthutha|

ಮಂಗಳೂರು: ವಿದ್ಯಾವಂತರ ಜಿಲ್ಲೆ ಎನಿಸಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಹೇಯ ಕೃತ್ಯವೊಂದು ನಡೆದಿದ್ದು, ಎಂಟು ವರ್ಷ ಪ್ರಾಯದ ಮಗುವನ್ನು ಹತ್ಯೈಗೈದು ಡ್ರೈನೇಜ್’ನಲ್ಲಿ ಹಾಕಿ ಕಿರಾತಕರು ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಳಿಕ ಕೊಲೆ ಮಾಡಲಾಗಿದೆ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಉಳಾಯಿಬೆಟ್ಟುವಿನ ಪರಾರಿ ಎಂಬಲ್ಲಿರುವ ಹಂಚಿನ ಕಾರ್ಖಾನೆಯೊಂದರಲ್ಲಿ ಘಟನೆ ನಡೆದಿದೆ. ಕಾರ್ಖಾನೆಯಲ್ಲೇ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ದಂಪತಿಯ ಪುಟ್ಟ ಮಗುವನ್ನು ದಾರುಣವಾಗಿ ಕೊಲೆ ಮಾಡಿದ್ದಾರೆ. ಮಧ್ಯಾಹ್ನದ ಬಳಿಕ ಮಗು ಕಾಣೆಯಾಗಿತ್ತು. ಆದರೆ ಕೆಲಸದಲ್ಲಿ ಮಗ್ನರಾಗಿದ್ದ ಪೋಷಕರ  ಗಮನಕ್ಕೆ ಬಂದಿರಲಿಲ್ಲ.

ಸಂಜೆಯ ಬಳಿಕವೂ ಮಗು ಬಾರದೇ ಇದ್ದಾಗ ಗಾಬರಿಗೊಂಡ ಪೋಷಕರು ಹುಡುಕಾಡತೊಡಗಿದ್ದರು. ಸಂಜೆ 6 ಗಂಟೆಯ ವೇಳೆಗೆ ಮಗುವಿನ ಮೃತದೇಹ ಕಾರ್ಖಾನೆಯ ಡ್ರೈನೇಜ್’ನಲ್ಲಿ ಪತ್ತೆಯಾಗಿದೆ. ಮಗುವಿನ ದೇಹದ ಮೇಲೆ ಗಾಯದ ಗುರುತುಗಳಿದ್ದು, ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

- Advertisement -

ಉಳಾಯಿಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿದ್ದ ಹಂಚು ಮತ್ತು ಇಟ್ಟಿಗೆಯ ಕಾರ್ಖಾನೆಯಲ್ಲಿ ಉತ್ತರ ಪ್ರದೇಶ ಮೂಲದ 29 ಕಾರ್ಮಿಕರು ಕೆಲಸಮಾಡುತ್ತಿದ್ದರು. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮಗುವಿನ ಕೊಲೆಮಾಡಿರುವ ಶಂಕೆಯ ಮೇರೆಗೆ 16 ಮಂದಿ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮೂವರು ಪರಾರಿಯಾಗಿದ್ದು ಅವರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.





Join Whatsapp