ಇಂಡೋನೇಷ್ಯಾ: ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಅಭಿಯಾನ ಸೆಮಿಫೈನಲ್’ನಲ್ಲಿ ಅಂತ್ಯವಾಗಿದೆ. ಭಾರತದ ಸ್ಟಾರ್ ಆಟಗಾರರಾದ ಪಿ.ವಿ. ಸಿಂಧು, ಹಾಗೂ ಪುರುಷರ ವಿಭಾಗದಲ್ಲಿ ಕೆ. ಶ್ರೀಕಾಂತ್ ಸೆಮಿಫೈನಲ್‌ನಲ್ಲಿ ಸೋತು ಕೂಟದಿಂದ ನಿರ್ಗಮಿಸಿದ್ದಾರೆ.
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಅಗ್ರಶ್ರೇಯಾಂಕಿತ ಆಟಗಾರ್ತಿ ಜಪಾನಿನ ಅಕಾನೆ ಯಮಾಗುಚಿಗೆ ಸುಲಭದಲ್ಲಿ ಶರಣಾದರು. ಕೇವಲ 32 ನಿಮಿಷದಲ್ಲಿ ಮುಗಿದ ಏಪಕಪಕ್ಷೀಯ ಪಂದ್ಯದಲ್ಲಿ ಯಮಾಗುಚಿ 21-13, 21-9 ಅಂತರದಿಂದ ಸಿಂಧುಗೆ ಸೋಲಿನ ಕಹಿಯುಣಿಸಿದರು.
ವೃತ್ತಿ ಜೀವನದಲ್ಲಿ ಯಮಗುಚಿ ವಿರುದ್ಧ 12-7 ಅಂತರದ ಗೆಲುವಿನ ದಾಖಲೆ ಹೊಂದಿದ್ದ ಸಿಂಧು, ಇಂದಿನ ಪಂದ್ಯದಲ್ಲೂ ಗೆಲ್ಲುವ ಫೇವರಿಟ್ ಆಟಗಾರ್ತಿಯಾಗಿದ್ದರು. ಈ ವರ್ಷ ಇವರಿಬ್ಬರು ಎರಡು ಬಾರಿ ಪರಸ್ಪರ ಮುಖಾಮುಖಿಯಾಗಿದ್ದ ವೇಳೆ ಯಮಾಗುಚಿಗೆ ಸಿಂಧು ಸೋಲುಣಿಸಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಸೇಡು ತೀರಿಸಿಕೊಂಡ ಜಪಾನ್;ನ ಆಟಗಾರ್ತಿ ಫೈನಲ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಮಹಿಳೆಯರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟರ್ಕಿಯ ಶ್ರೇಯಾಂಕ ರಹಿತ ಆಟಗಾರ್ತಿ ನೆಸ್ಲಹಾನ್ ಯುಗಿಟ್ ವಿರುದ್ಧ 21-13, 21-10, ಅಂತರದಲ್ಲಿ ಸಿಂಧು ನೇರ ಸೆಟ್’ಗಳ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.
ಶ್ರೀಕಾಂತ್ ನಿರ್ಗಮನ: ಇನ್ನೊಂದೆಡೆ ಪುರುಷರ ಸಿಂಗಲ್ಸ್’ನ ಸೆಮಿಫೈನಲ್’ನಲ್ಲೂ ಭಾರತಕ್ಕೆ ನಿರಾಸೆ ಕಾದಿತ್ತು. ಡೆನ್ಮಾರ್ಕ್‌ನ 3ನೇ ಶ್ರೇಯಾಂಕಿತ ಆಟಗಾರ ಆ್ಯಂಡ್ರೆಸ್ ಅಂಟೋನ್ಸೆನ್ ವಿರುದ್ಧ ಶ್ರೀಕಾಂತ್ 21-14, 21-9 ಅಂತರದಿಂದ ನೇರ ಸೆಟ್’ಗಳಲ್ಲಿ ಪರಾಭವಗೊಂಡರು. ಕ್ವಾರ್ಟರ್ ಫೈನಲ್‌ನಲ್ಲಿ ಎಚ್.ಎಸ್. ಪ್ರಣಯ್ ವಿರುದ್ಧ ಗೆಲುವ ಸಾಧಿಸಿದ್ದ ಶ್ರೀಕಾಂತ್ ಸೆಮಿಫೈನಲ್ ಪ್ರವೇಶಿಸಿದ್ದರು.