ಸಂಸತ್ತಿನಲ್ಲಿ ನೂತನ ಕೃಷಿ ಕಾಯ್ದೆ ರದ್ದಾಗುವವರೆಗೂ ಸತ್ಯಾಗ್ರಹ ಹಿಂಪಡೆಯಲ್ಲ: ರೈತ ಮುಖಂಡ ರಾಕೇಶ್ ಟಿಕಾಯತ್

Prasthutha|

ಗಾಝಿಯಾಬಾದ್: ಸಂಸತ್ತಿನಲ್ಲಿ ವಿವಾದಾತ್ಮಕ ಕಾಯ್ದೆಗಳನ್ನು ರದ್ದುಪಡಿಸಿದ ನಂತರವೇ ರೈತರ ಪ್ರತಿಭಟನೆಯನ್ನು ಹಿಂಪಡೆಯಲಾಗುವುದೆಂದು ಭಾರತೀಯ ಕಿಸಾನ್ ಯೂನಿಯನ್ (ಬಿ.ಕೆ.ಯು) ಮುಖಂಡ ರಾಕೇಶ್ ಟಿಕಾಯತ್ ಶುಕ್ರವಾರ ತಿಳಿಸಿದ್ದಾರೆ.

- Advertisement -

ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಮ್.ಎಸ್.ಪಿ) ಮತ್ತು ಇತರ ವಿಷಯಗಳ ಬಗ್ಗೆ ಸರ್ಕಾರ ರೈತರೊಂದಿಗೆ ಸಮಾಲೋಚನೆ ನಡೆಸಲಿ ಎಂದು ಅವರು ಒತ್ತಿ ಹೇಳಿದರು.

ಕಳೆದ ಒಂದು ವರ್ಷಗಳಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಬೆನ್ನಲ್ಲೇ, ಈ ಕಾಯ್ದೆಗಳನ್ನು ಪ್ರಧಾನಿ ಮೋದಿ ರದ್ದುಗೊಳಿಸಿದ ಘೋಷಣೆಯ ಬಳಿಕ ರಾಕೇಶ್ ಟಿಕಾಯತ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಮಧ್ಯೆ ಹೇಳಿಕೆ ಬಿಡುಗಡೆ ಮಾಡಿರುವ ಸಂಯುಕ್ತ ಕಿಸಾನ್ ಮೋರ್ಚಾ, ಕಾಯ್ದೆ ಹಿಂಪಡೆದಿರುವ ನಿರ್ಧಾರ ಸ್ವಾಗತಾರ್ಹ. ಸೂಕ್ತ ಸಂಸದೀಯ ಪ್ರಕ್ರಿಯೆಗಳ ಮೂಲಕ ಪ್ರಕಟಣೆಯು ಜಾರಿಗೆ ಬರುವುದನ್ನು ಕಾಯುವುದಾಗಿ ಹೇಳಿದೆ. ಅದು ಸಂಭವಿಸಿದಲ್ಲಿ, ಇದು ಭಾರತದಲ್ಲಿ ಒಂದು ವರ್ಷದಿಂದ ನಡೆಯುತ್ತಿರುವ ರೈತ ಆಂದೋಲನದ ಒಂದು ಐತಿಹಾಸಿಕ ವಿಜಯವಾಗಲಿದೆ ಎಂದು ವರ್ಣಿಸಿದೆ.

- Advertisement -

ಆದರೆ, ಈ ಹೋರಾಟದಲ್ಲಿ ಸುಮಾರು 700 ರೈತರು ಹುತಾತ್ಮರಾಗಿದ್ದಾರೆ. ಲಖಿಂಪುರ ಖಿರಿ ಹತ್ಯಾಕಾಂಡ ಸೇರಿದಂತೆ ಈ ಸಾವುಗಳನ್ನು ತಪ್ಪಿಸಬಹುದಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರದ ಹಟವೇ ಹೊಣೆಯಾಗಿದೆ ಎಂದೂ ಅದು ಹೇಳಿದೆ.

ರೈತರ ಈ ಚಳುವಳಿಯು ಮೂರು ಕರಾಳ ಕಾಯಿದೆಗಳನ್ನು ರದ್ದುಪಡಿಸಲು ಮಾತ್ರವಲ್ಲದೆ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕಾನೂನಾತ್ಮಕ ಬೆಲೆ ಖಾತ್ರಿ ಮತ್ತು ಎಲ್ಲಾ ರೈತರಿಗೆ ಲಾಭದಾಯಕ ಬೆಲೆ ಪಡೆಯುವುದಕ್ಕಾಗಿ ಕೂಡ ಆಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನಿಗಳಿಗೆ ನೆನಪಿಸಿದೆ.

ರೈತರ ಈ ಮಹತ್ವದ ಬೇಡಿಕೆ ಇನ್ನೂ ಬಾಕಿ ಇದೆ. ಅದೇ ರೀತಿ ವಿದ್ಯುತ್ ತಿದ್ದುಪಡಿ ಮಸೂದೆಯನ್ನೂ ಹಿಂಪಡೆಯಬೇಕಿದೆ. ಸಂಯುಕ್ತ ಕಿಸಾನ್ ಮೋರ್ಚಾ ಶೀಘ್ರದಲ್ಲೇ ತನ್ನ ಸಭೆಯನ್ನು ನಡೆಸುತ್ತದೆ, ಎಲ್ಲಾ ಘಟನೆಗಳನ್ನು ಪರಿಗಣಿಸಿ ಯಾವುದಾದರೂ ಮುಂದಿನ ನಿರ್ಧಾರಗಳಿದ್ದಲ್ಲಿ ಅವನ್ನು ಪ್ರಕಟಿಸುತ್ತದೆ ಎಂದು ಸಂಯುಕ್ತ ಕಿಸಾನ್‍ ಮೋರ್ಚಾದ ಮುಖಂಡರಾದ ಬಲ್ಬೀರ್ ಸಿಂಗ್ ರಾಜೇವಾಲ್, ಡಾ. ದರ್ಶನ್ ಪಾಲ್, ಗುರ್ನಾಮ್ ಸಿಂಗ್ ಚಧುನಿ, ಹನ್ನನ್ ಮೊಲ್ಲಾ, ಜಗಜಿತ್ ಸಿಂಗ್ ದಲ್ಲೆವಾಲ್, ಜೋಗಿಂದರ್ ಸಿಂಗ್ ಉಗ್ರಹಾನ್, ಶಿವಕುಮಾರ್ ಶರ್ಮಾ (ಕಾಕ್ಕಾ ಜಿ) ಮತ್ತು ಯುಧ್ವೀರ್ ಸಿಂಗ್ ಜಂಟಿಯಾಗಿ ನೀಡಿರುವ ಈ ಹೇಳಿಕೆ ತಿಳಿಸಿದೆ.



Join Whatsapp