ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಯುನೆಸ್ಕೊ (ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯ) ಕಾರ್ಯಕಾರಿ ಮಂಡಳಿಗೆ ನಡೆದ ಮರುಚುನಾವಣೆಯಲ್ಲಿ ಭಾರತವು ಗೆಲುವು ಸಾಧಿಸಿದೆ. ಈ ಮೂಲಕ 2021–25ರ ಅವಧಿಗೂ ತನ್ನ ಸದಸ್ಯತ್ವವನ್ನು ಭಾರತ ಮುಂದುವರಿಸಲಿದೆ. 164 ಮತಗಳನ್ನು ಪಡೆಯುವ ಮೂಲಕ ಯುನೆಸ್ಕೊದ ಕಾರ್ಯಕಾರಿ ಮಂಡಳಿಯ ಸದಸ್ಯ ಸ್ಥಾನಕ್ಕೆ 2021–25ರ ಅವಧಿಗೆ ಭಾರತವು ಮರು ಆಯ್ಕೆಯಾಗಿದೆ ಎಂದು ಭಾರತದ ಖಾಯಂ ನಿಯೋಗದ ಟ್ವಿಟರ್ ಖಾತೆ ಪ್ರಕಟಿಸಿದೆ.
ಯುನೆಸ್ಕೊ ಕಾರ್ಯಕಾರಿ ಮಂಡಳಿ ಸದಸ್ಯರ ಚುನಾವಣೆಯೂ ಬುಧವಾರ ನಡೆದಿದ್ದು, ಆರನೇ ಗುಂಪಿನ ಏಷ್ಯಾ ಮತ್ತು ಪೆಸಿಫಿಕ್ ರಾಷ್ಟ್ರಗಳ ಪೈಕಿ ಜಪಾನ್, ಫಿಲಿಪ್ಪೀನ್ಸ್, ವಿಯೆಟ್ನಾಂ, ಕುಕ್ ಐಲ್ಯಾಂಡ್ಸ್ ಹಾಗೂ ಚೀನಾವೂ ಆಯ್ಕೆಗೊಂಡಿದೆ. ಯುನೆಸ್ಕೊ ಕಾರ್ಯಕಾರಿ ಮಂಡಳಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಡಿಯಲ್ಲಿ ಕಾರ್ಯಾಚರಿಸುತ್ತದೆ. ಸಂಸ್ಥೆಯು ನಡೆಸುವ ಎಲ್ಲಾ ಕಾರ್ಯಕ್ರಮಗಳು ಹಾಗೂ ಪ್ರಧಾನ ನಿರ್ದೇಶಕರು ಸಲ್ಲಿಸುವ ಬಜೆಟ್ ಅಂದಾಜಿಗೆ ಸಂಬಂಧಿಸಿದಂತೆ ಕಾರ್ಯಕಾರಿ ಮಂಡಳಿಯು ಪರಿಶೀಲನೆ ನಡೆಸುತ್ತದೆ.
ವಿಶ್ವಸಂಸ್ಥೆಯ ಮೂರು ಅಂಗಗಳಲ್ಲಿ ಯುನೆಸ್ಕೊ ಕಾರ್ಯಕಾರಿ ಮಂಡಳಿಯೂ ಒಂದು ಭಾಗವಾಗಿದ್ದು, ಒಟ್ಟು 58 ಸದಸ್ಯ ರಾಷ್ಟ್ರಗಳನ್ನು ಯುನೆಸ್ಕೊ ಕಾರ್ಯಕಾರಿ ಮಂಡಳಿಯು ಹೊಂದಿದೆ.