T-20 ಕ್ರಿಕೆಟ್’ನಲ್ಲಿ ಕಿವೀಸ್ ವಿರುದ್ಧ ಭಾರತಕ್ಕೆ ‘ದಾಖಲೆ’ಯ ಗೆಲುವು

Prasthutha|

ಜೈಪುರ: ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ T-20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್’ಗಳ ಅಂತರದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ T-20 ಕ್ರಿಕೆಟ್’ನಲ್ಲಿ ಚೇಸಿಂಗ್’ನಲ್ಲಿ ಅತೀ ಹೆಚ್ಚು ಗೆಲುವು ದಾಖಲಿಸಿದ ತಂಡವೆಂಬ ಖ್ಯಾತಿ ಟೀಮ್ ಇಂಡಿಯಾ ಪಾಲಾಗಿದೆ.

- Advertisement -

ನ್ಯೂಜಿಲೆಂಡ್ ನೀಡಿದ್ದ 165 ರನ್’ಗಳ ಗುರಿಯನ್ನು 19.3 ಓವರ್’ಗಳಲ್ಲಿ 5 ವಿಕೆಟ್ ನಷ್ಟದಲ್ಲಿ  ತಲುಪಿದ ಟೀಮ್ ಇಂಡಿಯಾ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು. ಚೇಸಿಂಗ್ ವೇಳೆ ರೋಹಿತ್ ಶರ್ಮಾ 48 ರನ್’ಗಳಿಸಿದರೆ, ಸೂರ್ಯಕುಮಾರ್ ಯಾದವ್  62 ರನ್’ಗಳಿಸಿ ಟ್ರೆಂಟ್ ಬೌಲ್ಟ್’ಗೆ ಕ್ಲೀನ್ ಬೌಲ್ಡ್ ಆದರು.

T-20 ಕ್ರಿಕೆಟ್’ನಲ್ಲಿ ಚೇಸಿಂಗ್’ ಮೂಲಕ ಟೀಮ್ ಇಂಡಿಯಾದ ಗೆಲುವು ಸಾಧಿಸಿದ 50ನೇ ಪಂದ್ಯ ಇದಾಗಿದೆ. ಆ ಮೂಲಕ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳನ್ನು (ತಲಾ 49 ಗೆಲುವು) ಗೆಲುವಿನ ದಾಖಲೆಯಲ್ಲಿ ಭಾರತ ಹಿಂದಿಕ್ಕಿದೆ.

- Advertisement -

 ಜೈಪುರದ  ಸವಾಯ್ ಮಾನ್’ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಭಾರತಕ್ಕೆ ಲಭಿಸಿತ್ತು. ನೂತನ ನಾಯಕನ ಬೌಲಿಂಗ್ ನಿರ್ಧಾರವನ್ನು ಸಮರ್ಥಿಸುವ ರೀತಿಯಲ್ಲಿ ಬೌಲಿಂಗ್ ಮಾಡಿದ ಬೌಲರ್’ಗಳು ಆರಂಭದಲ್ಲಿಯೇ ಕಿವೀಸ್’ಗೆ ಆಘಾತ ನೀಡಿದ್ದರು.

ಒಂದು ರನ್’ಗಳಿಸುವಷ್ಟರಲ್ಲಿಯೇ ನ್ಯೂಜಿಲೆಂಡ್ ಮೊದಲ ವಿಕೆಟ್ ಪತನವಾಗಿತ್ತು. ICC T-20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ಹೀರೋ ಡೇರಿಲ್ ಮಿಚೆಲ್ ಖಾತೆ ತೆರಯುವ ಮುನ್ನವೇ ಭುವನಬೇಶ್ವರ್ ಕುಮಾರ್ ಬೌಲಿಂಗ್’ನಲ್ಲಿ  ಬೌಲ್ಡ್ ಆದರು. ಮೂರನೇ ವಿಕೆಟ್’ಗೆ ಜೊತೆಯಾದ ಮಾರ್ಕ್ ಚಾಪ್’ಮ್ಯಾನ್ ಹಾಗೂ ಆರಂಭಿಕ ಮಾರ್ಟಿನ್ ಗಪ್ಟಿಲ್ ಶತಕದ ಜೊತೆಯಾಟವಾಡಿದರು. ಮಾರ್ಕ್ ಚಾಪ್’ಮ್ಯಾನ್ 63 ರನ್’ಗಳಿಸಿದರೆ, ಮಾರ್ಟಿನ್ ಗಪ್ಟಿಲ್ 70 ರನ್’ಗಳಿಸಿದರು.

ಭಾರತದ ಪರ ಭುವನೇಶ್ವರ್ ಕುಮಾರ್ ಹಾಗೂ ಆರ್. ಆಶ್ವಿನ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಹಾಗೂ ಕೊಹ್ಲಿ ತ್ಯಜಿಸಿದ ನಾಯಕತ್ವದ ಜವಾಬ್ಧಾರಿಯನ್ನು ಹೆಗಲಿಗೇರಿಸಿಕೊಂಡಿರುವ ‘ಹಿಟ್’ಮ್ಯಾನ್’ ರೋಹಿತ್ ಶರ್ಮಾ ಮೊದಲ ಅಗ್ನಿ ಪರೀಕ್ಷೆಯನ್ನು ಯಶಸ್ವಿಯಾಗಿಯೇ ದಾಟಿದ್ದಾರೆ.  T-20 ಸರಣಿಯ 2ನೇ ಪಂದ್ಯ ಶುಕ್ರವಾರ ರಾಂಚಿಯಲ್ಲಿ ನಡೆಯಲಿದೆ.



Join Whatsapp