ಪಾಟ್ನಾ : ನಾಳೆಯಷ್ಟೇ ಬಿಹಾರದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಈ ನಡುವೆ, ಅಲ್ಲಿನ ಮುಂಗೆರ್ ಪಟ್ಟಣದಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವಿಚಾರದಲ್ಲಿ ನಡೆದ ಘರ್ಷಣೆಯಲ್ಲಿ ಓರ್ವ ಬಲಿಯಾಗಿದ್ದಾನೆ. ಪೊಲೀಸರು ಮತ್ತು ದುರ್ಗಾ ಆರಾಧಕರ ನಡುವೆ ಗುಂಪು ಘರ್ಷಣೆ ನಡೆದಿದ್ದು, ಗುಂಡು ತಗುಲಿ ಒಬ್ಬ ಮೃತಪಟ್ಟಿದ್ದು, 20 ಮಂದಿ ಪೊಲೀಸರು ಸೇರಿದಂತೆ 27 ಮಂದಿ ಗಾಯಗೊಂಡಿದ್ದಾರೆ.
ಘರ್ಷಣೆಯಲ್ಲಿ ಕೆಲವರು ಬಂದೂಕು ಬಳಸಿದ್ದರು ಎನ್ನಲಾಗಿದೆ. ಸಾಮಾನ್ಯವಾಗಿ ವಿಜಯ ದಶಮಿ ಹಬ್ಬದ ಮೂರು ದಿನಗಳ ಬಳಿಕ ವಿಗ್ರಹಗಳನ್ನು ವಿಸರ್ಜನೆ ಮಾಡಲಾಗುತ್ತದೆ. ಆದರೆ, ಈ ಬಾರಿ ಬುಧವಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇರುವುದರಿಮದ, ಮಂಗಳವಾರವೇ 5 ಗಂಟೆಯೊಳಗೆ ದುರ್ಗಾ ವಿಸರ್ಜನೆಗೆ ಅಧಿಕಾರಿಗಳು ಒತ್ತಾಯಿಸಿದ್ದರು.
ದುರ್ಗಾ ಪೂಜಾ ಸಂಘಟಕರು ತೆರಳುವ ಸಂದರ್ಭ ಜೋರಾಗಿ ಡಿಜೆ ಸಂಗೀತ ಹಾಕಲಾಗಿತ್ತು. ರಾತ್ರಿ 11:50ರ ಸುಮಾರಿಗೆ ವಿಗ್ರಹ ಹೊತ್ತು ಸಾಗುತ್ತಿದ್ದವರನ್ನು ಪೊಲೀಸರು ಥಳಿಸಿದುದು ಪರಿಸ್ಥಿತಿ ವಿಕೋಪಕ್ಕೆ ತೆರಳಲು ಕಾರಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾದಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಏಳು ಮಂದಿಗೆ ಗುಂಡಿನ ಏಟು ತಗುಲಿದೆ ಎನ್ನಲಾಗಿದೆ.
ಈ ಕುರಿತ ವೀಡಿಯೊವೊಂದನ್ನು ಟ್ವೀಟ್ ಮಾಡಿರುವ ಸಾಮಾಜಿಕ ಹೋರಾಟಗಾರ ಕನ್ಹಯ್ಯಾ ಕುಮಾರ್, ಘಟನೆಯಲ್ಲಿ ನಾಲ್ವರು ಮೃತಪಟ್ಟಿರುವುದಾಗಿ ಸ್ಥಳೀಯರು ಹೇಳುತ್ತಿರುವುದಾಗಿ ತಿಳಿಸಿದ್ದಾರೆ.