ಹೊಸದಿಲ್ಲಿ: ದೆಹಲಿ ಮತ್ತು ಹತ್ತಿರದ ನಗರಗಳಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ ಆದೇಶಿಸಿದೆ.
ಮುಂದಿನ ಸೂಚನೆ ಬರುವವರೆಗೆ ಶಾಲಾ-ಕಾಲೇಜುಗಳನ್ನು ತೆರಯದಂತೆ ಆದೇಶ ಹೊರಡಿಸಲಾಗಿದೆ. ದೀಪಾವಳಿ ಆಚರಣೆಯ ನಂತರ ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟವು ಗಗನಕ್ಕೇರಿದ ನಂತರ ಆಯೋಗವು ಈ ಹೊಸ ಆದೇಶ ನೀಡಿದೆ.
ಇದರೊಂದಿಗೆ ದೆಹಲಿಯ ಶಿಕ್ಷಣ ಸಂಸ್ಥೆಗಳು ಲಾಕ್’ಡೌನ್ ಸಮಯದಲ್ಲಿದ್ದ ಆನ್’ಲೈನ್ ತರಗತಿ ವ್ಯವಸ್ಥೆಗೆ ಮರಳಲು ಸಿದ್ಧವಾಗಿವೆ.
ದೆಹಲಿಯ ಹೊರತಾಗಿ, ನೆರೆ ರಾಜ್ಯಗಳಾದ ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೂ ಆಯೋಗವು ನಿರ್ದೇಶನಗಳನ್ನು ನೀಡಿದೆ.
ರೈತರು ಕೃಷಿ ತ್ಯಾಜ್ಯವನ್ನು ಸುಡುವುದೇ ವಾಯು ಮಾಲಿನ್ಯಕ್ಕೆ ಕಾರಣ ಎಂದು ಕೇಂದ್ರ ಸರ್ಕಾರದ ವಾದ. ಇದನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಅಗತ್ಯವಿದ್ದರೆ ದೆಹಲಿಯಲ್ಲಿ ಕೇಂದ್ರವು ಎರಡು ದಿನಗಳ ಲಾಕ್‌ಡೌನ್ ಅನ್ನು ಘೋಷಿಸಬಹುದು ಎಂದು ಹೇಳಿದ ನ್ಯಾಯಾಲಯವು ತಕ್ಷಣವೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶಿಸಿತ್ತು.
ದೆಹಲಿಯ ಪುಸಾ ರೋಡ್, ದ್ವಾರಕಾ, ಪ್ರಗತಿ ವಿಹಾರ್, ನೋಯ್ಡಾ ಮತ್ತು ಚಾಣಕ್ಯಪುರಿಯಲ್ಲಿ ವಾಯುಮಾಲಿನ್ಯದ ಮಟ್ಟವು ಅತ್ಯಧಿಕವಾಗಿದೆ. ನಗರದಲ್ಲಿ ನಿರ್ಮಾಣ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ದೆಹಲಿ ಸರ್ಕಾರವು ತಾತ್ಕಾಲಿಕವಾಗಿ ನಿಷೇಧಿಸಿದೆ.