ವಾಷಿಂಗ್ಟನ್: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅವುಗಳ ಸಶಸ್ತ್ರ ಅಂಗಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವನ್ನು ಅಪಾಯಕಾರಿ ಸಂಘಟನೆಗಳೆಂದು ಫೇಸ್ ಬುಕ್ ಪರಿಗಣಿಸುವಂತೆ ಆಗ್ರಹಿಸಿ ಅಮೆರಿಕದ ಎಂಟು ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಯಿತು. ಭಾರತದಲ್ಲಿ ದ್ವೇಷದ ಭಾಷಣವನ್ನು ಮುಕ್ತವಾಗಿ ಪೋಸ್ಟ್ ಮಾಡಲು ಫೇಸ್ ಬುಕ್ ಅವಕಾಶ ಮಾಡಿಕೊಟ್ಟ ಪರಿಣಾಮ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮೇಲೆ ದೈಹಿಕ ದಾಳಿಗಳು ಮತ್ತು ಹತ್ಯೆಗಳು ಉಂಟಾದವು ಎಂದು ಆರೋಪಿಸಿ ವಿವಿಧ ಧರ್ಮ, ವೃತ್ತಿ ಮತ್ತು ವಿವಿಧ ಹಿನ್ನೆಲೆಯ ನೂರಾರು ಮಂದಿ ಪ್ರತಿಭಟನೆ ನಡೆಸಿದರು.
ಇಂಡಿಯಾ ಜೆನೋಸೈಡ್ ವಾಚ್ ಆಯೋಜಿಸಿದ್ದ ಪ್ರತಿಭಟನೆಗಳಲ್ಲಿ, ಫೇಸ್ ಬುಕ್ ನ ಸಂಸ್ಥಾಪಕ-ಸಿಇಒ ಮಾರ್ಕ್ ಜುಕರ್ ಬರ್ಗ್ ಮತ್ತು ಅವರ ಕಂಪೆನಿ ತೀವ್ರ ಹಿಂದೂ ಬಲಪಂಥೀಯರ ಹಿಂಸಾಚಾರದ ಪ್ರಚೋದನೆಗೆ ಸಹಭಾಗಿತ್ವವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದರು.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪ್ರತಿಭಟನಕಾರರು ಅಟ್ಲಾಂಟಾ, ಚಿಕಾಗೋ, ಷಾರ್ಲೆಟ್, ಹೂಸ್ಟನ್, ಲಾಸ್ ಏಂಜಲೀಸ್, ಸ್ಯಾನ್ ಡಿಯಾಗೋ, ಸಿಯಾಟಲ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಮೆನ್ಲೋ ಪಾರ್ಕ್ ಮುಂತಾದ ಸ್ಥಳಗಳಲ್ಲಿ ಪ್ರದರ್ಶನ ನಡೆಸಿದರು.
” ಪ್ರಧಾನಿ ನರೇಂದ್ರ ಮೋದಿ ಅವರ ಭಾರತೀಯ ಜನತಾ ಪಕ್ಷ, ಅದರ ನಾಜಿ ಪ್ರೇರಿತ ಸೈದ್ಧಾಂತಿಕ ಪೋಷಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅವುಗಳ ಸಶಸ್ತ್ರ ಅಂಗಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮುಂತಾದವುಗಳನ್ನು ಅಪಾಯಕಾರಿ ಸಂಘಟನೆಗಳಾಗಿ ಫೇಸ್ ಬುಕ್ ಪರಿಗಣಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ” ಎಂದು ಭಾರತೀಯ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ನ ಕಾರ್ಯನಿರ್ವಾಹಕ ನಿರ್ದೇಶಕ ರಶೀದ್ ಅಹ್ಮದ್ ಆಗ್ರಹಿಸಿದರು.
“ಭಾರತದ ಮುಸ್ಲಿಮರ ವಿರುದ್ಧ ಫ್ಯಾಶಿಸ್ಟ್ ಹಿಂಸಾಚಾರಕ್ಕೆ ಅನುವು ಮಾಡಿಕೊಡುವ ಇಸ್ಲಾಮೋಫೋಬಿಕ್ ದ್ವೇಷವನ್ನು ತಡೆಯಲು ಫೇಸ್ ಬುಕ್ ಉದ್ದೇಶಪೂರ್ವಕವಾಗಿ ಮತ್ತು ಅರಿವಿದ್ದೇ ನಿರ್ಲಕ್ಷ್ಯ ತೋರಿದೆ. ಫೇಸ್ ಬುಕ್ ತನ್ನ ಕೈಗಳಲ್ಲಿ ರಕ್ತವನ್ನು ಅಂಟಿಸಿಕೊಂಡಿದೆ.” ಅಂಬೇಡ್ಕರ್ ಕಿಂಗ್ ಸ್ಟಡಿ ಸರ್ಕಲ್ ನ ಕಾರ್ತಿಕ್ ಆರೋಪಿಸಿದರು.