ಬೆಂಗಳೂರು : ಇಲ್ಲಿನ ಅರಮನೆ ಮೈದಾನದಲ್ಲಿ ಜರಗಿದ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್ ಅವರ ಪದಗ್ರಹಣ ಸಮಾರಂಭದ ವೇಳೆ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಬೆಂಬಲಿಗರ ವರ್ತನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡರು. ಕಾರ್ಯಕ್ರಮದಲ್ಲಿ ಝಮೀರ್ ಅಹ್ಮದ್ ಖಾನ್ ಗೈರಾಗಿದ್ದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಝಮೀರ್ ಅಹ್ಮದ್ ಭಾವಚಿತ್ರಗಳನ್ನು ಹಿಡಿದು ಘೋಷಣೆ ಕೂಗಿದರು. ಇದರಿಂದಾಗಿ ಕೆರಳಿದ ಸಿದ್ದರಾಮಯ್ಯ ತನ್ನ ಭಾಷಣವನ್ನು ಅರ್ಧಕ್ಕೇ ನಿಲ್ಲಿಸಿ ನಿರ್ಗಮಿಸಿದರು.
ಝಮೀರ್ ಅಹ್ಮದ್ ರ ನೂರಕ್ಕೂ ಅಧಿಕ ಬೆಂಬಲಿಗರು ಝಮೀರ್ ಪರ ಘೋಷಣೆಗಳನ್ನು ಕೂಗಿ ಹಲವು ನಾಯಕರ ಭಾಷಣಗಳಿಗೆ ಅಡ್ಡಿಪಡಿಸುವ ಪ್ರಯತ್ನ ಮಾಡಿದ್ದು, ಸಿದ್ದರಾಮಯ್ಯ ಮಾತನಾಡುವ ವೇಳೆ ಬೆಂಬಲಿಗರ ಘೋಷಣೆಗಳು ಹೆಚ್ಚಾದವು. ಇದರಿಂದ ಕೆರಳಿದ ಸಿದ್ದರಾಮಯ್ಯ ಝಮೀರ್ ಫಲಕಗಳನ್ನು ಕೆಳಗೆ ಇಳಿಸುವಂತೆ ಮತ್ತು ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಇದಕ್ಕೆ ಜಗ್ಗದ ಬೆಂಬಲಿಗರು ಘೋಷಣೆಗಳನ್ನು ಮುಂದುವರೆಸಿದ ಕಾರಣ ಸಿದ್ದರಾಮಯ್ಯ ತಮ್ಮ ಭಾಷಣವನ್ನೇ ಅರ್ಧಕ್ಕೆ ನಿಲ್ಲಿಸಿದರು.
ಬೆಂಬಲಿಗರ ಇಂತಹ ವರ್ತನೆಗಳು ಅನವಶ್ಯಕ. ಯಾರು ಈ ರೀತಿ ಕಾರ್ಯಕ್ರಮಗಳನ್ನು ಹಾಳು ಮಾಡಲು ಪ್ರಯತ್ನಿಸಬಾರದೆಂದು ಇದೇ ವೇಳೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.