ಚೆನ್ನೈ : ಕಾಲಿವುಡ್ ನಟ ಸೂರ್ಯ ಅಭಿನಯದ ಜೈ ಭೀಮ್ ಚಿತ್ರ, ಚಲನಚಿತ್ರಗಳ ಮಾನದಂಡ ಸಂಸ್ಥೆಯಾದ IMDB RANKING’ನಲ್ಲಿ ನಂ1. ಸ್ಥಾನಕ್ಕೇರಿದೆ. ಈ ಹಾದಿಯಲ್ಲಿ ಜೈ ಭೀಮ್, ಹಾಲಿವುಡ್’ನ ಪ್ರಖ್ಯಾತ ಚಿತ್ರ ‘ದಿ ಶಾಶಂಕ್ ರಿಡೆಂಪ್ಶನ್’ ಚಿತ್ರವನ್ನು ಹಿಂದಿಕ್ಕಿದೆ.
9.6 ರೇಟಿಂಗ್ ಪಡೆಯುವ ಮೂಲಕ ಜೈ ಭೀಮ್ IMDB RANKING’ನಲ್ಲಿ ನಂ1. ಸ್ಥಾನಕ್ಕೇರಿದ್ದು, ಇಲ್ಲಿಯವರೆಗೆ 98 ಸಾವಿರ ಮತಗಳನ್ನು ಪಡೆದಿವೆ. 1994ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್ ಚಿತ್ರ ‘ದಿ ಶಾಶಂಕ್ ರಿಡೆಂಪ್ಶನ್’ ಚಿತ್ರ 9.3 ರೇಟಿಂಗ್’ನೊಂದಿಗೆ ಇಷ್ಟು ವರ್ಷಗಳ ಕಾಲ ನಂ.1 ಸ್ಥಾನದಲ್ಲಿತ್ತು. ‘ದಿ ಶಾಶಂಕ್ ರಿಡೆಂಪ್ಶನ್’ ಚಿತ್ರದ ಪರವಾಗಿ ಮತ ಚಲಾಯಿಸಿದವರ ಸಂಖ್ಯೆ ಮಿಲಿಯನ್ ದಾಟಿದೆ.
ಇಂಟರ್ನೆಟ್ ಮೂವಿ ಡೇಡಾ ಬೇಸ್ – IMDB, ಚಲನಚಿತ್ರಗಳ ಬಗ್ಗೆ ಜಾಲತಾಣಿಗರು ವ್ಯಕ್ತಪಡಿಸುವ ಅಭಿಪ್ರಾಯಗಳು, ವಿಮರ್ಶೆಗಳ ಬಗ್ಗೆ ತಿಳಿಸುವ ಒಂದು ಜಾಲತಾಣ ಮಾನದಂಡ ಸಂಸ್ಥೆಯಾಗಿದೆ. ಚಲನಚಿತ್ರಗಳು ಮಾತ್ರವಲ್ಲದೆ ದೂರದರ್ಶನ ಕಾರ್ಯಕ್ರಮಗಳು, ವಿಡಿಯೋ ಗೇಮ್ ಗಳಿಗೆ ಸಂಬಂಧಿಸಿದ ಜಾಲತಾಣಿಗರ ಅಭಿಪ್ರಾಯದ ದತ್ತಾಂಶವನ್ನು IMDB ನೀಡುತ್ತದೆ.
ಬುಡಕಟ್ಟು ಜನಾಂಗದ ಮೇಲೆ ನಡೆದ ದೌರ್ಜನ್ಯ, ಕ್ರೌರ್ಯದ ಕಥಾ ಹಂದರವನ್ನು ಹೊಂದಿರುವ ಸೂರ್ಯ ಅಭಿನಯದ ಜೈ ಭೀಮ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಧೂಳೆಬ್ಬಿಸಿದೆ. 1995ರ ನೈಜ ಘಟನೆ ಆಧರಿಸಿದ ‘ಜೈ ಭೀಮ್’ ಸಿನಿಮಾದಲ್ಲಿ, ಇರುಳರು ಸಮುದಾಯಕ್ಕೆ ಪೊಲೀಸ್ ಇಲಾಖೆ ಯಾವ ರೀತಿಯಲ್ಲಿ ಹಿಂಸೆ ನೀಡಿದ್ದಾರೆ, ಅದರಿಂದ ಏನೆಲ್ಲ ಕಷ್ಟಗಳನ್ನು ಅವರು ಎದುರಿಸಬೇಕಾಯ್ತು? ವಕೀಲ ಚಂದ್ರು ಹೇಗೆ ನ್ಯಾಯಾಲಯದಲ್ಲಿ ವಾದ ಮಾಡಿ ನ್ಯಾಯ ತಂದುಕೊಡುತ್ತಾನೆ ಎಂಬುದರ ಬಗ್ಗೆ ಮನೋಜ್ಞವಾಗಿ ಚಿತ್ರೀಕರಿಸಲಾಗಿದೆ. ಇಲಿ, ಹಾವು ಹಿಡಿದು, ಇಟ್ಟಂಗಿ ಒಡೆದು ಬದುಕುವ ಇರುಳರು ಎಂಬ ಮುಗ್ದ ಬುಡಕಟ್ಟು ಜನಾಂಗ ಪೋಲಿಸರ ಕಪಿಮುಷ್ಟಿಗೆ ಸಿಲುಕಿ ನರಳಿದ ಇತಿಹಾಸ ಈ ಸಿನಿಮಾದಲ್ಲಿದೆ.