ಆಗ್ರಾ: ಉತ್ತರ ಪ್ರದೇಶದ ಮುಝಫರ್ ನಗರದ ಪೆಟ್ರೋಲ್ ಪಂಪ್ ನಲ್ಲಿ ಇತ್ತಂಡಗಳ ನಡುವೆ ಏರ್ಪಟ್ಟ ಘರ್ಷಣೆಯಲ್ಲಿ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಖತೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ದೆಹಲಿ ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ ಪೆಟ್ರೋಲ್ ಪಂಪ್ ನಲ್ಲಿ ಇಂಧನ ತುಂಬಿಸಲು ವಾಹನವನ್ನು ಸರತಿ ಸಾಲಿನಲ್ಲಿ ನಿಲ್ಲಿಸಿದ್ದ ವೇಳೆ ಇತ್ತಂಡಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿ ನಡೆದ ಘರ್ಷಣೆಯಲ್ಲಿ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಖತೋಲಿ ಠಾಣಾಧಿಕಾರಿ ಧರ್ಮೇಂದ್ರ ಸಿಂಗ್, ಈ ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ಸ್ಥಳದಲ್ಲಿ ಭದ್ರತೆಯನ್ನು ಬಿಗಿಗೊಳಿಸಿ, ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.