ಬೆಂಗಳೂರು: ಬಿಟ್ ಕಾಯಿನ್ ಹಗರಣದ ಸೂತ್ರಧಾರನೆನ್ನಲಾದ ಶ್ರೀಕೃಷ್ಣ/ ಶ್ರೀಕಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕೆಂದು ಸಿಎಂ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ. ವಿಶ್ವದಾದ್ಯಂತ ಗಮನ ಸೆಳೆದಿರುವ ಈ ಹಗರಣದಲ್ಲಿ ಬಹಳಷ್ಟು ಪ್ರಭಾವಶಾಲಿಗಳು ಷಾಮೀಲಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಭದ್ರತೆ ಅಗತ್ಯವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಟ್ ಕಾಯಿನ್ ಹಗರಣ ಸ್ಫೋಟಗೊಂಡ ನಂತರ ಸಣ್ಣ ಮಟ್ಟದ ಆರೋಪದ ಮೇಲೆ ನಾಟಕೀಯ ರೀತಿಯಲ್ಲಿ ನಡೆದಿರುವ ಶ್ರೀಕೃಷ್ಣನ ಬಂಧನ, ಅಷ್ಟೇ ನಾಟಕೀಯವಾಗಿ ಜಾಮೀನು ಮೇಲೆ ಬಿಡುಗಡೆಯಾಗಿರುವುದು ಪೊಲೀಸರ ನಡವಳಿಕೆಗಳ ಬಗ್ಗೆ ಸಂಶಯಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ರಾಜ್ಯ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಶ್ರೀಕಿಗೆ ಮಾದಕ ವಸ್ತು ಚಟ ಇದ್ದುದನ್ನು ಹೇಳಲಾಗಿದೆ. ಆ ಸಮಯದಲ್ಲಿ ಶ್ರೀಕಿ ತಂದೆಯೇ ಪತ್ರ ಬರೆದು ತಮ್ಮ ಮಗನಿಗೆ ಪೊಲೀಸರು ಡ್ರಗ್ಸ್ ನೀಡಿದ್ದರು ಎಂದು ಆರೋಪಿಸಿದ್ದರು ಎನ್ನುವುದು ಗಮನಾರ್ಹ. ಶ್ರೀಕಿ ಈಗಲೂ ಡ್ರಗ್ ವ್ಯಸನಿಯೇ? ವ್ಯಸನಿಯಾಗಿದ್ದರೆ ಪೊಲೀಸರು ಈ ಬಾರಿ ಬಂಧಿಸಿದಾಗ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆಯೇ? ಡ್ರಗ್ಸ್ ವ್ಯಸನಿ ಎನ್ನುವುದು ಪರೀಕ್ಷೆಯಿಂದ ದೃಢಪಟ್ಟಿದ್ದರೆ ಸೂಕ್ತ ಚಿಕಿತ್ಸೆ ನೀಡಲಾಗಿದೆಯೇ? ಈ ಬಗ್ಗೆ ಮುಖ್ಯಮಂತ್ರಿ ಮತ್ತು ರಾಜ್ಯ ಗೃಹ ಸಚಿವರು ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಬಿಟ್ ಕಾಯಿನ್ ಹಗರಣ ತಂತ್ರಜ್ಞಾನ ಅವಲಂಬಿಸಿರುವ ‘ಬಿಳಿಕಾಲರ್ ಅಪರಾಧ’. ಇದಕ್ಕೆ ಸಂಬಂಧಿಸಿದ ಖಾತೆಗಳ ಪಾಸ್ ವರ್ಡ್ ಸೇರಿದಂತೆ ಬಹಳಷ್ಟು ಮಾಹಿತಿಗಳು ಶ್ರೀಕಿಯ ನೆನಪಲ್ಲಿ ಮಾತ್ರ ಇದೆ, ಲಿಖಿತ ದಾಖಲೆಗಳಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕಿಯ ಪ್ರಾಣಕ್ಕೆ ಅಪಾಯದ ಸಾಧ್ಯತೆ ಇದೆ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.